July 13, 2025

ವೈಷ್ಣವ-ಶೈವ ಧರ್ಮಗಳ ಸಂಘರ್ಷ`ದೇವಾಲಯ ಚಕ್ರವರ್ತಿ’ V/S ‘ವಿಕ್ರಮಾದಿತ್ಯ’

ಜೂಡಿ ನ್ಯೂಸ್:

ಇಟ್ಟಗಿಯಲ್ಲಿದ್ದ 400 ಬ್ರಾಹ್ಮಣ ಕುಟುಂಬಗಳ ಇತಿಹಾಸ ಬಯಲಾಗಬೇಕಿದೆ..?

ನನಗೀಗ 66 ವರ್ಷ, ಶಿವರಾಂ ಕಾರಂತರು ನಮ್ಮೂರಿಗೆ ಬಂದು, ಈ ದೇಗುಲ ನೋಡುತ್ತಿದ್ದಾಗ, ಅವರ ಬ್ಯಾಗ್‍ನ್ನು ಹೊತ್ತುಕೊಂಡು ಅವರ ಹಿಂದೆ ಹೋದಾಗಿನಿಂದ, ನಮ್ಮೂರಲ್ಲಿದ್ದ 400 ಕ್ಕೂ ಹೆಚ್ಚು ಬ್ರಾಹ್ಮಣ ಕುಟುಂಬಗಳು ಏನಾದವು..? ಎಲ್ಲಿಗೆ ಹೋದವು..? ಯಾಕೆ ಹೋದವು..? ನನಗೆ ಉತ್ತರ ಸಿಕ್ಕಿಲ್ಲ. ನನಗಾಗ 12 ರ ವಯಸ್ಸು. ಮಹದೇವ ದಂಡನಾಯಕ, ವೈಷ್ಣವ ಪಂಥದವನು. ಅಲ್ಲಿರುವ ಎಲ್ಲಾ ದಾಖಲೆಗಳಲ್ಲಿ ವೈಷ್ಣವ ದೇವತೆಗಳ ಮಾಹಿತಿ ಇದೆ. ವಿಜಯನಗರದ ಕಂಪಣರಾಜನು ಈ ದೇಗುಲ ಜೀರ್ಣೋದ್ಧಾರ ಮಾಡಿದ ದಾಖಲೆಗಳಿವೆ. ಮಹದೇವ ದಂಡನಾಯಕನ ಕಾಲದಲ್ಲಿ ಅಪೂರ್ಣವಾದ ಈ ದೇಗುಲ, 400 ವರ್ಷಗಳ ತರುವಾಯ ಶೈವ ದೇವಾಲಯವಾಗಿದ್ದೇಕೆ..? ಇವುಗಳಿಗೆ ಸಂಶೋಧಕರು ಉತ್ತರಿಸಬೇಕಿದೆ. ಈ ಹಾದಿಯಲ್ಲಿ ಕೆಲ ಮಾಹಿತಿಯನ್ನು ಲಕ್ಷ್ಮಣ್ ಕೌಂಟೆಯವರ “ವಿಕ್ರಮಾದಿತ್ಯ” ಒದಗಿಸಿದರೂ, ಇತಿಹಾಸ ಬೇರೆ ಏನನ್ನೋ ಹೇಳುತ್ತಿದೆ. ದೇಗುಲದ ಹೊರಗಿರುವ ಬ್ರಹ್ಮನ ಮೂರ್ತಿಗೂ, ಈ ದೇಗುಲಕ್ಕೂ ಸಂಬಂಧವೇನು..? ಇಟಗಿಯಿಂದ ಕಣ್ಮರೆಯಾದ ಬ್ರಾಹ್ಮಣರು ಮತ್ತು ದಂಡನಾಯಕ ಮದ್ಯೆ ಸಂಘರ್ಷವಾಯಿತೆ..? ಇಲ್ಲಿಯ ಬ್ರಾಹ್ಮಣ ಕುಟುಂಬದವರು ಓಡಿಹೋದರೆ ಅಥವಾ ಇಲ್ಲೊಂದು ಕಲ್ಯಾಣ ಪೂರ್ವ ರಕ್ತ ಕ್ರಾಂತಿಯೇ ನಡೆಯಿತೆ..? ಕಣ್ಮರೆಯಾದ ಬ್ರಾಹ್ಮಣರು ಇಟಗಿಯನ್ನು ತೊರೆಯುವಾಗ ಈ ಊರಿಗೊಂದು ಶಾಪ ನೀಡಿದರೆ..? ಈ ಬಗ್ಗೆ ಅನೇಕ ನಿದರ್ಶನಗಳು ತರ್ಕಕ್ಕೆ ನಿಲುಕುತಿಲ್ಲ. ಇಲ್ಲಿರುವ ಶಿಲಾಶಾಸನಕ್ಕೂ ನಡೆದಿರುವ ಇತಹಾಸಕ್ಕೂ ತಾಳೆ ಆಗುತ್ತಿಲ್ಲ..?

ಹೊಸ ವರ್ಷದ ಓದು `ವಿಕ್ರಮಾದಿತ್ಯ’ ಹೊಸ ವರ್ಷದ ಪ್ರಾರಂಭ ಕಲ್ಯಾಣ ಚಾಲುಕ್ಯರ 6ನೇ ವಿಕ್ರಮಾದಿತ್ಯನ ಕಾದಂಬರಿಯ ಓದಿನೊಂದಿಗೆ ಪ್ರಾರಂಭವಾಗಿದೆ. ಈ ಕಾದಂಬರಿ ಚರಿತ್ರೆ ನನ್ನೂರು ಇಟಗಿಗೆ ಸಂಪರ್ಕ ಸೇತು. ಕಲಬುರ್ಗಿಯ ಲೇಖಕ, ಸಂಶೋಧಕ ಡಾ. ಲಕ್ಷ್ಮಣ ಕೌಂಟೆಯವರ ಕೃತಿ ಇದು.

ನನ್ನೂರು ಇಟಗಿಯ ಮಹದೇವ ದಂಡನಾಯಕ 6ನೇ ವಿಕ್ರಮಾದಿತ್ಯನ ಆಡಳಿತದಲ್ಲಿ, ಇಟ್ಟಗಿ ಅಗ್ರಹಾರದ ದಂಡಾಧೀಶನಾಗಿದ್ದ. ತನ್ನ ಆಡಳಿತದ ನೆನಪಿಗಾಗಿ ಕಟ್ಟಿದ ಮಹಾ ದೇಗುಲವೇ `ದೇವಾಲಯ ಚಕ್ರವರ್ತಿ’ ಬಿರುದಾಂಕಿತ ಮಹಾದೇವ ದೇಗುಲ. 1112ರಲ್ಲಿ ಇದನ್ನು ಕಟ್ಟಲಾಗಿದೆ. ಬೇಲೂರಿನ ಚನ್ನಕೇಶವ ದೇವಾಲಯ 70 ಎಂ.ಎಂ.ನಲ್ಲಿದ್ದರೆ, ಇಟಗಿಯ ಮಹದೇವ ದೇಗುಲ 35 ಎಂ.ಎಂ. ಸಿನಿಮಾದಂತೆ. ಸೂಕ್ಷ್ಮ, ಅತೀ ಸೂಕ್ಷ್ಮ ಅದ್ಭುತ ಶಿಲೆ ಇಲ್ಲಿ ಕಲೆಯಾಗಿ ಅರಳಿದೆ.

ವಿಕ್ರಮಾದಿತ್ಯ 50 ವರ್ಷಗಳ ಕಾಲ ಆಳಿದ್ದ. ವೀರನು, ಶೂರನು ಆದ ವಿಕ್ರಮಾದಿತ್ಯನ ಚರಿತ್ರೆಯಲ್ಲೆ, ಬಸವ ಯುಗದ ಕ್ರಾಂತಿಯ ಕಲ್ಪನೆ ಕಾಣಿಸಿ, ಅಂದಿನ ಜೈನ್-ವೈಷ್ಣವ-ಶೈವ ಧರ್ಮಗಳ ಸಂಘರ್ಷದ ಬೀಜ ಮೊಳಕೆಯೊಡೆದ ದಾಖಲೆ ಸಿಕ್ಕರೆ, ರಾಜ್ಯಭಾರಕ್ಕೆ ದಾಯಾದಿ ಕಲಹದ ಹಿನ್ನೆಲೆ ನಮಗೆ ಸಿಗುತ್ತದೆ. ಕ್ರಿ.ಪೂ. ಅಶೋಕನಿಂದ, ಹಿಡಿದು ವಿಕ್ರಮಾದಿತ್ಯನ ರಾಜ್ಯಭಾರವು ಕೂಡಾ ಈ ದಾಯಾದಿ ಕಲಹದ ದಾಖಲೆ ಒದಗಿಸುತ್ತದೆ.

ಕಾದಂಬರಿಯಲ್ಲಿ ಬರುವ ಕೇಶರಾಜನೆಂಬ ಮುಖ್ಯಮಂತ್ರಿ ವಿಕ್ರಮಾದಿತ್ಯ ಸ್ನೇಹಿತನೂ, ಬಾಲ್ಯದ ಗೆಳೆಯನು ಹೌದು. ಇಟಗಿಗೆ ಭೇಟಿ ನೀಡಿದ ದಾಖಲೆಯನ್ನು ಲೇಖಕರು ಒದಗಸಿದ್ದಾರೆ. ಹಾಗೆಯೇ ಇಲ್ಲಿಯ ದೇಗುಲದ ಅರ್ಚಕ, ಶ್ರೀಕಾಂತ್ ಪೂಜಾರಿ ಪ್ರಸ್ತುತ ದೇಗುಲದ ಅಧಿಕೃತ ಮಾಹಿತಿದಾರ. ಆತ ಮುದ್ರಿಸಿದ ಕರಪತ್ರಗಳಲ್ಲಿ ಕೆಲವು ದಾಖಲೆಗಳಿವೆ. ವಿಜಯನಗರದ ಅರಸ ಕಂಪಣನು ದೇವಾಲಯ ಜೀರ್ಣೋದ್ಧಾರ ಮಾಡಿದನೆಂದು ಶಾಸನ ಆಧಾರ ನೀಡಿದ್ದಾರೆ.

ಈ ಆಧಾರಗಳ ಹಿನ್ನೆಲೆಯಲ್ಲಿ, ಈ ದೇಗುಲದಲ್ಲಿರುವ ಶಾಸನ ಒಂದು ದಾಖಲೆ. ಈ ಶಿಲಾ ಶಾಸನ ಹಾಗೂ ದೇಗುಲ ನಿರ್ಮಾಣದ ಕಾಲಗಳಲ್ಲಿ ವ್ಯತ್ಯಾಸವಿದೆ. ಸಂಶೋಧಕರು ಇದರ ಬಗ್ಗೆ ಗಮನ ಹರಿಸದೆ ಶಾಸನ ಆದರಿತ ಕತೆಯನ್ನು ಹೇಳುತ್ತಾರೆ, ಹೇಳಿದ್ದಾರೆ.

1112ರಲ್ಲಿದ್ದ ಕನ್ನಡ ಲಿಪಿಗೂ, ಈ ಲಿಪಿಗೂ ಅಜಗಜಾಂತರ ವ್ಯತ್ಯಾಸವಿದೆ. ಈಗಾಗಲೇ ದೇಗುಲದ ಆವರಣ ಸ್ವಚ್ಚಗೊಳಿಸಿ, ದೇಗುಲ ಆಕ್ರಮಿತ ಮನೆಗಳನ್ನು ತೆರವುಗೊಳಿಸಿ, ದೇವಾಲಯಕ್ಕೆ ಒಂದು ಚೌಕಟ್ಟು ನಿರ್ಮಿಸಲಾಗಿದೆ.

ಈ ದೇಗುಲದ ಮುಂದೆ ಬೃಹತ್ತಾದ 10 ಎಕರೆಗೂ ಹೆಚ್ಚಿನ ಕಲ್ಯಾಣಿ ಇದೆ. ಈ ಕಲ್ಯಾಣಿಯ ಮೇಲಿನ ದೇಗುಲಕ್ಕೆ ಭದ್ರತೆ ಒದಗಿಸಬೇಕಿದೆ. ಕಲ್ಯಾಣಿ ಹಾಗೂ ದೇಗುಲದ ಮಧ್ಯೆಯ ಗೋಡೆಯನ್ನು ಗಟ್ಟಿಗೊಳಿಸಬೇಕಿದೆ. ಇದು ತುರ್ತಾಗಿ ಆಗಬೇಕಾದ ಕೆಲಸ. ಇಲ್ಲದಿದ್ದರೆ ಇದು ಕುಸಿದು ದೇಗುಲದ ಮಂಟಪಕ್ಕೆ ದಕ್ಕೆ ತರಬಹುದಾದ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಎಕೆಂದರೆ ಈ ಎರಡರ ಮದ್ಯೆ, ಹಾಳು ಮಣ್ಣಿನ ಜಾಲವಿದೆ.

ಈ ದೇಗುಲದ ಉತ್ಖನನಕ್ಕೆ ಅರ್ಧ ಇಟಗಿಯನ್ನು ತೆರವುಗೊಳಿಸಬೇಕಿದೆ. ಆಗ ಹೆಚ್ಚಿನ ದಾಖಲೆಗಳು ಸಿಗಬಹುದು. ಈ ಬಗ್ಗೆ ಪುರಾತನ ದೇಗುಲಗಳ ಬಗ್ಗೆ, ಕೇಂದ್ರ ಸರ್ಕಾರ ಗಮನಹರಿಸಬೇಕಿದೆ. ಆಗ ಮಹಾದೇವ ದಂಡನಾಯಕನ ಚರಿತ್ರೆ ಬಯಲಿಗೆ ಬರಲು ಸಾಧ್ಯ. ವಿಕ್ರಮಾದಿತ್ಯನ ಕಾಲದ ಒಂದು ಪ್ರದೇಶದ ದಂಡಾಧಿಕಾರಿಯಾಗಿದ್ದ ಮಹದೇವ ದಂಡನಾಯಕ ಹಾಗೂ ವಿಕ್ರಮಾದಿತ್ಯನ 16 ಪತ್ನಿಯರ ಇತಿಹಾಸ ತೆಗೆದರೆ, ಆತನ ಆಡಳಿತ ಕಾಲದ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳಕಿಗೆ ಬರಲಿದೆ.

ಈ ಹಿನ್ನೆಲೆ ಬಗ್ಗೆ ನನ್ನದೆ ಒಂದು ತರ್ಕ ಅಥವಾ ಸಿದ್ಧಾಂತಕ್ಕೆ ಲೆಜೆಂಡ್ ಕಥೆ ಇದೆ. ಇದನ್ನು ಈಗಾಗಲೇ ನಾನು ಸಾಕಷ್ಟು ಸಲ ಬರೆದಿದ್ದೇನೆ.

ವಿಕ್ರಮಾದಿತ್ಯನ ಸಹೋದರ ಕಲಹದ ಬಗ್ಗೆ ಒಂದು ಶಾಪವಿದ್ದಂತೆ, ಇಟಗಿ ಮಹದೇವ ದೇಗುಲ ನಿರ್ಮಾಣ ಹಾಗೂ ಇಟ್ಟಗಿಯಲ್ಲಿದ್ದ 400 ಬ್ರಾಹ್ಮಣ ಕುಟುಂಬಗಳ ಇತಿಹಾಸ ಬಯಲಾಗಬೇಕಿದೆ. ಇಲ್ಲೊಂದು ಶಾಪದ ಪ್ರಭಾವವನ್ನು ಗುರುತಿಸಿದ್ದೇನೆ. ಸ್ವತಃ ಅನುಭವಿಸುತ್ತಿದ್ದೇನೆ.

11 ದೇಗುಲ ಹಾಗೂ ಮುಖ್ಯ ದೇಗುಲ, ಸರಸ್ವತಿ ಮುಂದಿರ ಚಂದ್ರಲೇಶ್ವರಿ ದೇಗುಲ, ನಾರಾಯಣಮೂರ್ತಿ ದೇಗುಲದ ಜೊತೆಗೆ 6 ಅಡಿಯ ಬ್ರಹ್ಮನ ಶಿಲೆ, ಈ ದೇಗುಲ ಕಥೆಯನ್ನು ಬೇರೆಯದೆ ಹೇಳುತ್ತದೆ. ಏಕೆಂದರೆ ಮಹದೇವ ದಂಡನಾಯಕ ವೈಷ್ಣವ ಪ್ರೇಮಿ. ಸಂಶೋಧಕರು ಈ ಬಗ್ಗೆ ಚಿಂತಿಸಲಿ. ಪ್ರತಿ ಅಮವಾಸ್ಯೆಯ ದಿನ ನಾನು ನನ್ನೂರಿನ ಹಿರಿಯ ಜಮೀನ್‍ನಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ನಾಗಚೌಡೇಶ್ವರಿ ಹಾಗೂ ಶ್ರೀನಾಗದೇವತೆಗಳ ಪೂಜೆಗೆ ಬರುತ್ತೇನೆ.

ಈ ಸಂದರ್ಭದಲ್ಲಿ ಸಂಶೋಧಕರು ಬಂದರೆ, ಈ ದೇಗುಲದ ಬಗ್ಗೆ ಅನೇಕ ದಾಖಲೆಗಳ ಮಾಹಿತಿ ಸಾಧ್ಯ. ಶೈವ ಹಾಗೂ ವೈಷ್ಣವರ ಸಂಘರ್ಷದಲ್ಲಿ, 400ಕ್ಕೂ ಹೆಚ್ಚು ಇದ್ದ ಬ್ರಾಹ್ಮಣ ಕುಟುಂಬಗಳು, ಇಟ್ಟಿಗೆಯಿಂದ ಕಣ್ಮರೆಯಾದ ಕಥೆ ಇಲ್ಲಿ ಮಣ್ಣಲ್ಲಿ ಮಣ್ಣಾಗಿದೆ. ಇದರ ಹಿನ್ನೆಲೆ ಕೆದಕಲು ಉತ್ಖನನ ಅತ್ಯವಶ್ಯಕ. ಅಣ್ಣಿಗೇರಿಯಲ್ಲಿ ಸಿಕ್ಕ ತಲೆ ಬುರುಡೆಗಳು ಈ ಬ್ರಾಹ್ಮಣರದ ಅಥವಾ ಮುಸ್ಲೀಮ್‍ರದಾ ಎಂಬ ಬಗ್ಗೆ ತನಿಖೆಯಾಗಬೇಕಿದೆ.

ಇಟಗಿಯ ಮಹದೇವ ದೇಗುಲವನ್ನು ಒಮ್ಮೆ ನೋಡಲು ಬನ್ನಿ. ಅದ್ಭುತ ಶಿಲ್ಪ ವೈಭವ ಇಲ್ಲಿದೆ. ಇಂಟರ್‍ನೆಟ್‍ನಲ್ಲಿ ಈ ದೇಗುಲದ ಬಗ್ಗೆ ಸಾಕಷ್ಟು ಮಾಹಿತಿಗಳಿವೆ. ನನ್ನನ್ನು ಸೇರಿದಂತೆ ಹಲವಾರು ಲೇಖಕರು ಅನೇಕ ಪತ್ರಿಕೆಗಳಲ್ಲಿ ದಾಖಲಿಸಿದ್ದಾರೆ. ಜೊತೆಗೆ ವಾರ್ತಾ ಇಲಾಖೆಯ ಡಾಕ್ಯುಮೆಂಟರಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಎಪಿಸೋಡ್‍ಗಳಿವೆ. ಅವರ ಅವರ ಮನಸ್ಸಿಗೆ ಬಂದಂತೆ ಕಥೆ ಹೇಳುತ್ತಾರೆ. ಆದರೆ ಇಲ್ಲಿಯ ಬ್ರಹ್ಮನ ಮೂರ್ತಿ ಬೇರೆಯದೆ ಕಥೆ ಹೇಳುತ್ತಾ, 12ನೇ ಶತಮಾನದ ಕಲ್ಯಾಣ ಕ್ರಾಂತಿ ಮೊದಲೆ, ಇಲ್ಲೊಂದು ಕ್ರಾಂತಿ ರಕ್ತ ಸಿಕ್ತ ಕಥೆ ನಡೆದ ಸುಳಿವು ನಿಮಗೆ ನೀಡುತ್ತದೆ.

ದೇವಸ್ಥಾನದಿಂದ ಕನಿಷ್ಟ ಮೂರು ಕಿ.ಮಿ.ಯೊಳಗೆ ಇರುವ ರಾಯನ ತೋಟವೇ ಅಂದಿನ ಸಿಹಿ ನೀರಿನ ಭಾವಿಯಾಗಿತ್ತು. ಸ್ನಾನ ಮತ್ತು ಪೂಜೆಗೆ ಬಳಕೆಯಾಗುತ್ತಿತ್ತು. ಅಲ್ಲಿಯವರೆಗೆ ಊರು ಬೆಳೆದಿದೆ. ಅನೇಕರು ತಮ್ಮ ಮನೆಗಳನ್ನು ನಿರ್ಮಿಸಲು ಈ ದೇಗುಲ ಕಲ್ಲುಗಳನ್ನು ಬಳಸಿರುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಹಿಂದೆ 20ಕ್ಕೂ ಹೆಚ್ಚು ಮನೆಗಳನ್ನು ಒಡೆದಾಗ, ಅನೇಕ ಶಿಲಾ ಪ್ರತಿಮೆಗಳು ದೊರೆತಿವೆ. ಅದರಂತೆ ಇಟಗಿಯ ಅರ್ಧ ಊರನ್ನು ಒಡೆದರೆ, ನಿಜವಾದ ಇತಿಹಾಸ ಬೆಳಕಿಗೆ ಬರಬಹುದು.

ಈಗಾಗಲೇ ಈ ಬಗ್ಗೆ ಪ್ರಾಚ್ಯವಸ್ತು ಇಲಾಖೆ ಒಂದು ಅಂದಾಜು ರೂಪರೇಖೆಯನ್ನು ಈ ಭಾಗದ ಜನರಿಗೆ ನೋಟಿಸ್ ರೂಪದಲ್ಲಿ ನೀಡಿದೆ. ಆರ್ಥಿಕ ಕೊರತೆಯಿಂದ ದೇಗುಲದ ಪುನರ್‍ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಇಂದಲ್ಲ ನಾಳೆ ಇದು ಸಾಧ್ಯವಾಗಬಹುದಾದರು, ಅದು ಹೇಳುವ ಸತ್ಯ ಇತಿಹಾಸ ಬೇರೆಯದೆ ಆಗಿರುತ್ತದೆ. ಬರುವ ಮುನ್ನ ಸಾಧ್ಯವಾದರೆ ಲಕ್ಷ್ಮಣ ಕೌಂಟೆಯವರ ವಿಕ್ರಮಾದಿತ್ಯರ ಕಾದಂಬರಿಯನ್ನು ಓದಿ ಬನ್ನಿ. ಇದು ಸಂಶೋಧಕನಾತ್ಮಕ ಬರಹ.

ದೇಗುಲಕ್ಕೆ ಬರಲು : ಕೊಪ್ಪಳ ಅಥವಾ ಗದಗ ಮದ್ಯೆ (ಹೈವೆ 67 ಮೂಲಕ) ಬನ್ನಿಕೊಪ್ಪ ಕ್ರಾಸ್‍ನಿಂದ 5 ಕಿಮಿ ಒಳಗಡೆ ದೇಗುಲವಿದೆ. ಇಟಗಿಗೆ ಬರಲು, ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು, ಕುಕನೂರಿನಿಂದ ಟಾಮ್ ಟಾಮ್ ಟೆಂಪೋಗಳಿವೆ. ಕನಿಷ್ಠ ಅರ್ಧ ದಿನ ನೋಡಲು ಸಮಯ ಬೇಕು. ಅಲ್ಲಿಯ ಅರ್ಚಕ ಶ್ರೀಕಾಂತ ಪೂಜಾರಿಯನ್ನು ಸಂಪರ್ಕಿಸಿ (9008499506). ಅಮವಾಸ್ಯೆಗೆ ಬಂದರೆ ನಾನು ಲಭ್ಯ. (9845307327). ವಿಕ್ರಮಾದಿತ್ಯನನ್ನು ಇನ್ನೊಮ್ಮೆ ಓದಬೇಕಿದೆ.

– ರಮೇಶ ಸುರ್ವೆ, ಪತ್ರಕರ್ತ