July 13, 2025

ಪಿ. ನಾರಾಯಣ ಇವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

ಜೂಡಿ ನ್ಯೂಸ್ :

 ಕೊಪ್ಪಳ : ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುವ ಪಿ. ನಾರಾಯಣ ಇವರು ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಕೈಗಾರಿಕಾ ಬಾಂಧವ್ಯದಲ್ಲಿ ಸಲ್ಲಿಸಿದ ಅತ್ಯುತ್ತಮ ಕೊಡುಗೆಗಾಗಿ ಹರ್ಯಾಣದ ಕೈತಾಲ್‌ನಲ್ಲಿರುವ ನಿಲಿಮಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ನವದೆಹಲಿಯ ಸೂರ್ಯ ಹೋಟೆಲ್‌ನಲ್ಲಿ ದಿನಾಂಕ ೧೧-೦೧-೨೦೨೫ ರಂದು ಅಯೋಜಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಪಿ. ನಾಯಾಯಣ ಇವರು ಈ ಪ್ರಶಸ್ತಿ ಪದವಿಯನ್ನು ಸ್ವೀಕರಿಸಿದರು.

ಗೌರವ ಡಾಕ್ಟರೇಟ್ ಪ್ರಶಸ್ತಿ ಪದವಿಯು ತಮ್ಮ ಕ್ಷೇತ್ರ, ವೃತ್ತಿ ಅಥವಾ ಒಟ್ಟಾರೆ ಸಮಾಜದಲ್ಲಿ ಅಸಾಧಾರಣ ಕೊಡುಗೆ ನೀಡಿದ ವ್ಯಕ್ತಿಗಳಿಗೆ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ಅತ್ಯುನ್ನತ ಔದ್ಧಿಕ ಮತ್ತು ನೈತಿಕ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ.

 ಪಿ. ನಾರಾಯಣ ಇವರು ಮಾನವ ಸಂಪನ್ಮೂಲ, ಕೈಗಾರಿಕಾ ಬಾಂಧವ್ಯ, ಪರಿಸರ, ಆರೋಗ್ಯ ಮತ್ತು ಸುರಕ್ಷತೆ ಮತ್ತು ಸಮುದಾಯದ ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ೩೬ ವರ್ಷಗಳಿಗಿಂತ ಹೆಚ್ಚು ಅಪಾರ ಅನುಭವವನ್ನು ಹೊಂದಿರುವ ಕ್ರಿಯಾತ್ಮ ವೃತ್ತಿಪರರು. ಲಾಭದಾಯಕತೆ, ಅತ್ಯುತ್ತಮ ಸಂಪನ್ಮೂಲಗಳ ಬಳಕೆ ಮತ್ತು ಮಾನವ ಸಂಪನ್ಮೂಲ ನೀತಿಗಳು ಮತ್ತು ವ್ಯವಸ್ಥೆಗಳ ಅನುಷ್ಠಾನದಲ್ಲಿ ಅಪಾರ ಅನುಭವವುಳ್ಳ ಅತ್ಯುತ್ತಮ ನಾಯಕರಾಗಿದ್ದಾರೆ. ಇವರ ವಿಶ್ಲೇಷಣಾತ್ಮಕ ಕೌಶಲ್ಯಗಳು, ಕಾರ್ಯತಂತ್ರದ ಚಿಂತನೆಗಳು ಶಾಂತಚಿತ್ತದ ಅವಲೋಕನಗಳು ಇವರೊಂದಿಗೆ ಕೆಲಸ ಮಾಡುವ ಜನರ ಮೇಲೆ ಪ್ರಭಾವ ಬೀರಿದೆ. ಇವರು ಉತ್ಪಾದನೆ ಮತ್ತು ಉತ್ಪಾದಕತೆಯ ಆದ್ಯತೆಯೊಂದಿಗೆ ಕಾರ್ಮಿಕ ಸಂಘಗಳ ನಡುವೆ ೧೨ ದೀರ್ಘಾವಧಿಯ ವೇತನ ಒಪ್ಪಂದಗಳನ್ನು ಕಾರ್ಯಗತಗೊಳಿಸಿದ್ದಾರೆ.

ಇವರ ನೇತೃತ್ವದಲ್ಲಿ ವಿವಿಧ ಸಂಸ್ಥೆಗಳು ಮಾನವ ಸಂಪನ್ಮೂಲ, ಸುರಕ್ಷತೆ, ವ್ಯವಹಾರದಲ್ಲಿ ಉತ್ಕೃಷ್ಠತೆ ಮತ್ತು ಪರಿಸರ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡಯುವಲ್ಲಿ ಮಹತ್ತರದ ಪಾತ್ರ ವಹಿಸಿದ್ದಾರೆ. ಇವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ವಿಶೇಷವಾಗಿ ಗ್ರಾಮೀಣ ಬಡ ಜನರು, ವಿದ್ಯಾರ್ಥಿಗಳು ಮತ್ತು ದೀನದಲಿತರಿಗೆ ಸಹಾಯ ಮಾಡಿರುತ್ತಾರೆ.

 ಪಿ. ನಾರಾಯಣ ಇವರು ಪ್ರಶಸ್ತಿ ಸ್ವೀಕರಿಸಿದ ಸಂದರ್ಭದ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಇದು ನಿಜವಾಗಿಯೂ ವಿಶೇಷವಾಗಿದ್ದು, ಉನ್ನತವಾದ ಅನುಭೂತಿಯನ್ನು ಹೊಂದಿದ್ದೇನೆ ಹಾಗೂ ನಾನು ಮಾಡಿದ ಕೆಲಸಕ್ಕೆ ಸಿಕ್ಕ ಮನ್ನಣೆಯಾಗಿದೆ. ಈ ಸಾಧನೆಯನ್ನು ಸಾಧಿಸಲು ಮತ್ತು ನನ್ನ ಯಶಸ್ಸಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಕಾರಣೀಭೂತರಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ ಎಂದು ಕಿರ್ಲೋಸ್ಕರ್ ಫೆರಸ್ ಇಂಡಸ್ಟಿçಸ್ ಲಿಮಿಟೆಡ್‌ನ ಪರವಾಗಿ ಸಿಎಸ್‌ಆರ್ ಮತ್ತು ಆಡಳಿತ ವ್ಯವಸ್ಥಾಪಕರಾದ ಉದ್ದವ್ ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ