ಜೂಡಿ ನ್ಯೂಸ್ :
ಹಂಪಾಪಟ್ಟಣ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಜಾನಪದ ಕಲೆಗಳ ತವರೂರು ಸಾಂಸ್ಕೃತಿಕ ಹಿರಿಮೆಯ ಹಂಪಾಪಟ್ಟಣ ಗ್ರಾಮದ ರಂಗಭೂಮಿ ಕಲಾವಿದ ಸುನಿಲ್ ಕುಮಾರ್ ಅವರು ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಆಯ್ಕೆಯಾಗಿರುವುದು ತಾಲೂಕಿನ ಸಾಂಸ್ಕೃತಿಕ ವಲಯದಲ್ಲಿ ಅಪಾರ ಸಂತಸಕ್ಕೆ ಕಾರಣವಾಗಿದೆ. ಗ್ರಾಮೀಣ ಹಿನ್ನೆಲೆಯಿಂದ ಹೊರಹೊಮ್ಮಿದ ಕಲಾವಿದನೊಬ್ಬ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಂಸ್ಥೆಯ ರೆಪರ್ಟರಿಯಲ್ಲಿ ಸ್ಥಾನ ಪಡೆಯುವುದು ಅಪರೂಪದ ಹಾಗೂ ಶ್ಲಾಘನೀಯ ಸಾಧನೆಯಾಗಿದೆ.
ಕಳೆದ ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸುನಿಲ್ ಕುಮಾರ್ ಅವರು ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರದಲ್ಲಿ ಅಭಿನಯ ತರಬೇತಿಯನ್ನು ಪಡೆದಿದ್ದಾರೆ. ಜೊತೆಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯ ಪ್ರದರ್ಶನ ಕಲಾ ವಿಭಾಗದಲ್ಲಿ ಎಂ.ಎ. (ಡ್ರಾಮಾ) ಪದವಿಯನ್ನು ಪಡೆದಿದ್ದಾರೆ. ಸುಮಾರು 15 ವರ್ಷಗಳಿಂದ ನಿರಂತರವಾಗಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, 25 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
ಧಾರವಾಡ, ಮೈಸೂರು ಹಾಗೂ ಕಲಬುರಗಿ ರಂಗಾಯಣಗಳೊಂದಿಗೆ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವ ಅವರು, ಧಾರವಾಡ ರಂಗಾಯಣ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಜನಸಂಪರ್ಕ ಇಲಾಖೆ ಸಹಯೋಗದಲ್ಲಿ ಪ್ರದರ್ಶಿತವಾದ “ತಮಾಶ” ನಾಟಕದಲ್ಲಿ ಅಭಿನಯಿಸುವ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇದಲ್ಲದೆ, ಬೀದಿ ರಂಗಭೂಮಿಯ ಮೂಲಕ ಆರೋಗ್ಯ, ಸಮಾಜ ಕಲ್ಯಾಣ, ಕೃಷಿ, ಮತದಾನ ಜಾಗೃತಿ, ವಿಶ್ವ ವಿಖ್ಯಾತಿ ಹಂಪಿ ಉತ್ಸವದ ಧ್ವನಿ ಬೆಳಕಿನಲ್ಲಿ ಹಲವಾರು ಪಾತ್ರಗಳನ್ನು ಮನೋಜ್ಙವಾಗಿ ನಿರ್ವಹಿಸಿದ್ದಾರೆ,ಹೀಗೆ ಹಲವು ಸಾಮಾಜಿಕ ಶೈಕ್ಷಣಿಕ ವೈಜ್ಞಾನಿಕ ವಿಷಯಗಳನ್ನು ಜನಸಾಮಾನ್ಯರ ನಡುವೆ ತಲುಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ರೆಪರ್ಟರಿಗೆ ಆಯ್ಕೆಯಾಗಿರುವುದು ಸುನಿಲ್ ಕುಮಾರ್ ಅವರ ನಿರಂತರ ಪರಿಶ್ರಮ, ಶಿಸ್ತು ಹಾಗೂ ಕಲೆಯ ಮೇಲಿನ ಅಚಲ ನಿಷ್ಠೆಯ ಪ್ರತಿಫಲವಾಗಿದೆ. ಅವರ ಈ ಸಾಧನೆ ಹಂಪಾಪಟ್ಟಣ ಗ್ರಾಮಕ್ಕೆ, ಹಗರಿಬೊಮ್ಮನಹಳ್ಳಿ ತಾಲ್ಲೂಕಿಗೆ ಹಾಗೂ ವಿಜಯನಗರ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ಹಿಂದುಳಿದ ಜಾತಿ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಬುಡ್ಡಿಬಸವರಾಜ್, ಗ್ರಾಮ ಪಂಚಾಯತ್ ಅಧ್ಯಕ್ಷ ಹುಲಿಗೆಮ್ಮ ಕಾಳಪ್ಪ, ಗ್ರಾಮ ಪಂಚಾಯತ್ ಸದಸ್ಯರಾದ ಎನ್. ನಾಗರಾಜ್, ಬಿ. ನಾಗರಾಜ್, ಸಿ.ಎಲ್. ಕುಮಾರ್, ಟಿ. ಮಂಜುನಾಥ, ಪತ್ರಿ ಗೀತಾ, ಯಲ್ಲಪ್ಪ, ಹನುಮಕ್ಕ, ಎಚ್. ಮಂಜುಳಾ, ಅಂಜನಪ್ಪ, ಎಸ್. ಗಾಳೆಪ್ಪ, ವಿ.ಎಸ್.ಎಸ್.ಎಲ್. ಅಧ್ಯಕ್ಷೆ ಗಾಳೆಮ್ಮ, ಉಪಾಧ್ಯಕ್ಷ ಹುಲುಗಪ್ಪ, ಉಪಾಧ್ಯಕ್ಷೆ ಉಮಾ ಕುಬೇರ, ತಾಲೂಕು ಜಾನಪದ ಪರಿಷತ್ತ ಹಾಗೂ ಜನನಿ ಸೇವಾ ಟ್ರಸ್ಟ್ ಅಧ್ಯಕ್ಷ ಎ. ಕೇಶವಮೂರ್ತಿ, ಜಾನಪದ ಕಲಾವಿದ ನಾಗರಾಜ್ ಗಂಟಿ, ಎಸ್ ಡಿ ಎಂ ಸಿ ಅಧ್ಯಕ್ಷ ವಿ. ಹನುಮಂತ, ಉಪಾಧ್ಯಕ್ಷೆ ಜ್ಯೋತಿ ಗಣೇಶ್, ಕಾರ್ಮಿಕರ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಹಡಗಲಿ ಖಾಜಾ, ಎಸ್. ಚಂದ್ರು ಸೇರಿದಂತೆ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಸುನಿಲ್ ಕುಮಾರ್ ಅವರ ವಿಶೇಷ ಸಾಧನೆಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

More Stories
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ
ಹಿರಿಯ ಜೀವಿ ಸಿದ್ದರ ಪರಿ ಮಾಯಮ್ಮ ಅವರಿಂದ 77ನೇ ಗಣರಾಜ್ಯೋತ್ಸವದ ಧ್ವಜರೋಹಣ…