ಜೂಡಿ ನ್ಯೂಸ್ :
ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೊಂದಿಗೆ ಸಲಹಾ ಸಭೆ
ವಿಜಯನಗರ (ಹೊಸಪೇಟೆ) : ಈ ಬಾರಿ ಫೆ.28 ಹಾಗೂ ಮಾ.1, 2 ರಂದು ನಡೆಯಲಿರುವ ಹಂಪಿ ಉತ್ಸವ ಯಶಸ್ವಿಗೆ ಹಂಪಿಯ ನೆರೆಹೊರೆಯ ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಅಗತ್ಯ, ಈ ನಿಟ್ಟಿನಲ್ಲಿ
ಸ್ಥಳೀಯರ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ಕಮಲಾಪುರ ಪಟ್ಟಣದಲ್ಲಿನ ಮಯೂರ ಭುವನೇಶ್ವರಿ ಹೊಟೇಲ್‌ನಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಹಂಪಿ ಗ್ರಾಪಂ, ಮಲಪನಗುಡಿ ಗ್ರಾಪಂ ಹಾಗೂ ಕಮಲಾಪುರ ಪಟ್ಟಣ ಪಂಚಾಯಿತಿಯ ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಹಂಪಿ ಉತ್ಸವ ಪೂರ್ವಸಿದ್ಧತಾ ಸಲಹಾ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.
ಹಿಂದಿನ ವರ್ಷದ ಉತ್ಸವದ ಯಶಸ್ವಿಗೆ ಸ್ಥಳೀಯರ ಸಹಕಾರವೇ ಮುಖ್ಯವಾಗಿದೆ. ಈ ಭಾಗದ ರೈತರು ತಮ್ಮ ಜಮೀನುಗಳನ್ನು ತೆರವುಗೊಳಿಸಿ ಹಂಪಿ ಉತ್ಸವದ ತಯಾರಿಗೆ ಜಾಗ ನೀಡಿ ಸಹಕರಿಸಿದ್ದಕ್ಕೆ ರಾಜ್ಯಾದ್ಯಾಂತ ಬರುವ ಎಲ್ಲಾ ಜನರಿಗೆ ವಾಹನ ಪಾರ್ಕಿಂಗ್ ಸೇರಿದಂತೆ ವಿವಿಧ ವೇದಿಕೆಗಳ ನಿರ್ಮಾಣಕ್ಕೆ ಸಹಕಾರವಾಗಿದೆ. ಈ ಬಾರಿಯು ಜಿಲ್ಲಾಡಳಿತದ ಜತೆಗೆ ಎಲ್ಲರೂ ಕೈಜೋಡಿಸಬೇಕಿದೆ. ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಗ್ರಾಮಸ್ಥರು ಕುಟುಂಬ ಸಹಿತವಾಗಿ ಆಗಮಿಸಿ ಎಲ್ಲಾ ಕಾರ್ಯಕ್ರಮ ವೀಕ್ಷಣೆ ಮಾಡಬೇಕೆಂದು ತಿಳಿಸಿದರು.
ಸಭೆಗೆ ಆಗಮಿಸಿದ್ದ ಜನಪ್ರತಿನಿಧಿಗಳು ಮಾತನಾಡಿ, ಕಮಲಾಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಯಿಗಳು, ಬಿಡಾಡಿ ದನಗಳ ಹಾವಳಿ ಇದೆ. ನಿಯಂತ್ರಣಕ್ಕೆ ಮುಂದಾಗಬೇಕು, ಇಲ್ಲವಾದಲ್ಲಿ ಉತ್ಸವಕ್ಕೆ ಆಗಮಿಸಿದ ಯಾತ್ರಿಕರಿಗೆ ತೊಂದರೆಯಾಗದಂತೆ ಮುನ್ನೆಚರಿಕೆ ವಹಿಸಬೇಕಿದೆ. ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಕಲಾವಿದರಿಗೆ ಅದರಲ್ಲೂ ನೈಜ ಕಲಾವಿದರಿಗೆ ಅವಕಾಶ ನೀಡಿ ಆಗಮಿಸಿದ ಪ್ರೇಕ್ಷಕರಿಗೆ ಮನೋರಂಜನೆ ನೀಡಲು ಅವಕಾಶ ನೀಡಬೇಕು. ಉತ್ಸವದಲ್ಲಿ ಕಡ್ಡಾಯವಾಗಿ ದಿ.ಎಂ.ಪಿ.ಪ್ರಕಾಶ್‌ರವರ ಹೆಸರಿನಲ್ಲಿ ವೇದಿಕೆ ನಿರ್ಮಿಸುವಂತೆ ಮನವಿ ಮಾಡಿದರು. ಹಂಪಿ ಸ್ಮಾರಕಗಳಿಗೆ ಹಾನಿಯಾಗದಂತೆ ಸಿಸಿ ಕ್ಯಾಮೆರಾ ಮತ್ತು ವಿದ್ಯುತ್ ದೀಪ ಅಳವಡಿಸುವಂತೆ ಸೂಚಿಸಲಾಯಿತು. ಅನೆಗುಂದಿಯ ರಾಜವಂಶಸ್ಥರನ್ನು ಕಾರ್ಯಕ್ರಮಕ್ಕೆ ಗೌರವಾನ್ವಿತವಾಗಿ ಅಹ್ವಾನಿಸಲು ಸಲಹೆ ನೀಡಿದರು. ಬಳ್ಳಾರಿ, ಕೊಪ್ಪಳ ಜಿಲ್ಲೆಗಳಿಂದ ಹೆಚ್ಚು ಜನರು ಆಗಮಿಸುವ ನಿಟ್ಟಿನಲ್ಲಿ ಸೂಕ್ತ ಬಸ್ ಸಂಪರ್ಕ ಕಲ್ಪಿಸಲು, ಸ್ವಚ್ಛತೆ, ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ, ರಸ್ತೆ ಮಾರ್ಗ ದುರಸ್ಥಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಈ ವೇಳೆ ಹಂಪಿ ಗ್ರಾಪಂ ಅಧ್ಯಕ್ಷೆ ರಜಿನಿ ಷಣ್ಮುಖಗೌಡ, ಮಲಪನಗುಡಿ ಗ್ರಾಪಂ ಅಧ್ಯಕ್ಷೆ ಸೀತಮ್ಮ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಸಹಾಯಕ ಆಯುಕ್ತರಾದ ವಿವೇಕಾನಂದ, ನಗರಸಭೆ ಪೌರಾಯುಕ್ತ ಮನೋಹರ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗಪ್ಪ ತಳಕೇರಿ, ತಹಸೀಲ್ದಾರ ಎಂ.ಶೃತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಷಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್, ಡಿವೈಎಸ್‌ಪಿ ಮಂಜುನಾಥ ಇದ್ದರು.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ