July 13, 2025

ನಿಮ್ಮೂರಲ್ಲೇ 100 ದಿನ ಉದ್ಯೋಗ ಖಾತ್ರಿ ಕೆಲಸ ನಿರ್ವಹಿಸಿ ಕೂಲಿ ಹಣ ಪಡೆಯಿರಿ: ಜಿ.ಪಂ ಯೋಜನಾ ನಿರ್ದೇಶಕ ಪ್ರಕಾಶ ವಿ

ಜೂಡಿ ನ್ಯೂಸ್ :

ಇಂದರಗಿ ಗ್ರಾಮದ ಹಳೆ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ

ಕೊಪ್ಪಳ :- ಗ್ರಾಮೀಣ ಭಾಗದ ಕೂಲಿಕಾರರಿಗೆ ಮಹಾತ್ಮಾ ಗಾಂಧಿ ನರೇಗಾ ಯೋಜನೆಯು ವರದಾನವಾಗಿದ್ದು ಯೋಜನೆಯಡಿ ಕೂಲಿಕಾರರು ನಿಮ್ಮೂರಲ್ಲೇ 100 ದಿನ ಕೆಲಸ ನಿರ್ವಹಿಸಿ ಕೂಲಿ ಹಣ ಪಡೆದು ಆರ್ಥಿಕ ಸಬಲರಾಗಬೇಕೆಂದು *ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಪ್ರಕಾಶ ವಿ* ಕರೆ ನೀಡಿದರು. 

ದಿನಾಂಕ:05-04-2025ರಂದು ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮ ಪಂಚಾಯತಿಯಿಂದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಇಂದರಗಿ ಗ್ರಾಮದ ಹೊಸಕರೆ ಹೂಳೆತ್ತುವ ಸ್ಥಳಕ್ಕೆ ಭೇಟಿ ನೀಡಿ* ಕಾಮಗಾರಿ ಪರಿಶೀಲಿಸಿದರು. 

ಪ್ರಸಕ್ತದಲ್ಲಿ ಬೇಸಿಗೆ ಇರುವದರಿಂದ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಲಾಗಿದ್ದು ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಕೂಲಿಕಾರರು ರೂ.370/- ಕೂಲಿ ಹಣ ಬರುವಂತೆ ಕೆಲಸ ನಿರ್ವಹಿಸಬೇಕೆಂದು ಕರೆ ನೀಡಿದರು. ಒಂದು ಜಾಬಕಾರ್ಡಗೆ 100 ಮಾನವ ದಿನಗಳ ಕೂಲಿ ಕೆಲಸ ನೀಡಲಾಗುತ್ತಿದ್ದು ಯಾವುದೇ ಕಾರಣಕ್ಕೂ ಕೂಲಿ ಅರಸಿ ಬೇರೆ ಕಡೆ ಹೋಗುವಂತಿಲ್ಲವೆಂದರು.ರೂ.370/-ಕೂಲಿ ಹಣವನ್ನು ನಿಗದಿಪಡಿಸಲಾಗಿದ್ದು ಪ್ರತಿಯೊಬ್ಬರು 40 ಕ್ಯೂಬಿಕ್‌ ಮೀಟರ್‌ ಮಣ್ಣನ್ನು ಅಗೆದಲ್ಲಿ ಮಾತ್ರ ರೂ.370/- ಕೂಲಿ ಹಣ ಪಾವತಿಸಲಾಗುತ್ತದೆ. ಅಳತೆ ಕಡಿಮೆ ಬಂದಲ್ಲಿ ಕಡಿಮೆ ಕೂಲಿ ಹಣ ಪಾವತಿಯಾಗುತ್ತದೆ ಎಂದರು.

ಪ್ರಸಕ್ತದಲ್ಲಿ ಸ್ರ್ತೀ ಚೇತನ ಅಭಿಯಾನದಡಿ ಮಹಿಳೆಯರು ಹೆಚ್ಚಿನ ರೀತಿಯಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಹಾಜರಾಗಲು ಹೊಸದಾಗಿ ಮಹಿಳಾ ಕಾಯಕ ಬಂಧುಗಳನ್ನು ನೇಮಿಸಿಕೊಂಡು ಮಹಿಳೆಯರನ್ನು ಯೋಜನೆಯಡಿ ಭಾಗವಹಿಸಲು ಕ್ರಮವಹಿಸಲಾಗುತ್ತಿದೆ ಎಂದರು. ಜೂನ್‌ ವೇಳೆಗೆ ಮಳೆಗಾಲ ಪ್ರಾರಂಭವಾಗುತ್ತದೆ ಅಂತಹ ಸಂದರ್ಭದಲ್ಲಿ ಕೂಲಿ ಹಣದಿಂದ ಬರುವ ಬಿತ್ತನೆಗೆ ಕಾಳು, ಗೊಬ್ಬರ ಖರೀದಿಸಲು ಹಾಗು ಮಕ್ಕಳ ಶೈಕ್ಷಣಿಕ ವೆಚ್ಚಕ್ಕೆ ಬಳಸಲು ಅನುಕೂಲವಾಗುತ್ತದೆ ಎಂದರು. ಮಹಿಳೆಯರು ಹೆಚ್ಚು ಹೆಚ್ಚು ಯೋಜನೆಯಲ್ಲಿ ಭಾಗವಹಿಸುತ್ತಿರುವದರಿಂದ ಮಹಿಳಾ ಸಬಲೀಕರಣ ಆಗುವದಲ್ಲದೇ ಕುಟುಂಬಗಳು ಸದೃಢಗೊಳ್ಳುತ್ತವೆ ಎಂದರು. ನರೇಗಾ ಯೋಜನೆಯು ಸಮಾಜದ ದುರ್ಬಲ ವರ್ಗದವರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗುತ್ತಿದ್ದು ಅವರು ಕೂಡಾ ಸಾಮಾನ್ಯ ವ್ಯಕ್ತಿಗೆ ನೀಡಿದ ಅಳತೆಗಿಂತ ಅದರ ಅರ್ಧ ಕೆಲಸ ನಿರ್ವಹಿಸಿದಲ್ಲಿ ರೂ.370/- ಕೂಲಿ ಹಣ ಪಡೆದು ಜೀವನ ಸಾಗಿಸಬಹುದಾಗಿದೆ ಎಂದು ಮಾಹಿತಿ ನೀಡಿದರು. ನಂತರ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ನೆರಳಿನ ವ್ಯವಸ್ಥೆ ಮತ್ತು ಕುಡಿಯಲು ಯೋಗ್ಯವಾದ ನೀರು ಸೌಲಭ್ಯ ಕಲ್ಪಿಸಿರುವ ಬಗ್ಗೆ ಖುದ್ದು ಪರಿಶೀಲಿಸಿದರು. 

ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ,ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ,ಪಂಚಾಯತ ಅಭಿವೃದ್ದಿ ಅಧಿಕಾರಿ ನಾಗರಾಜ,ತಾಂತ್ರಿಕ ಸಹಾಯಕ ಕೊಟ್ರೇಶ್‌ ಜವಳಿ, ಬೇರ್‌ ಫೂಟ್‌ ಟೆಕ್ನಿಷಿಯನ್‌ ಗಾಳೆಪ್ಪ,ಗ್ರಾಮ ಕಾಯಕ ಮಿತ್ರ ಯಮನಮ್ಮ,ಗ್ರಾಮ ಪಂಚಾಯತ ಕರವಸೂಲಿಗಾರ ಮಂಜುನಾಥ ಕುರಿ, ಕೂಲಿಕಾರರು ಕಾಯಕ ಬಂಧುಗಳು ಹಾಜರಿದ್ದರು.