ಜೂಡಿ ನ್ಯೂಸ್ :
ನ್ಯಾ.ಡಾ.ನಾಗಮೋಹನ ದಾಸ್ ವರದಿ ಅನುಷ್ಠಾನ ಖಂಡಿಸಿ ಬಂಜಾರ, ಭೋವಿ, ಕೊರಚಸಮುದಾಯದಿಂದ ಬೃಹತ್ ಪ್ರತಿಭಟನೆ
ಹೊಸಪೇಟೆ : ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ನ್ಯಾ. ಡಾ.ನಾಗಮೋಹನ ದಾಸ್ ವರದಿಯನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡಿದೆ. ಇದನ್ನು ವಿರೋಧಿಸಿ ಲಂಬಾಣಿ, ಬೋವಿ, ಕೊರಚ, ಕೊರಮ ಸಮುದಾಯಗಳು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು.
ಇದಕ್ಕೂ ಮುನ್ನ ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಾಲಯದಿಂದ ಹೊರಟ ಮೆರವಣಿಗೆ ಮಹರ್ಷಿ ವಾಲ್ಮೀಕಿ ವೃತ್ತ, ಮದಕರಿ ನಾಯಕ ವೃತ್ತ, ಮಹಾತ್ಮ ಗಾಂಧಿ ವೃತ್ತ, ಬಸ್ ನಿಲ್ದಾಣ, ಪುನೀತ್ ರಾಜ್‌ಕುಮಾರ ವೃತ್ತದಲ್ಲಿ ಜಮಾವಣೆಗೊಂಡಿತು.
ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಚಿತ್ರದುರ್ಗದ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯಗಳಿಗೆ ಈ ವರದಿ ಅನುಷ್ಠಾನದಿಂದ ಭಾರಿ ಅನ್ಯಾಯ ಆಗಿದೆ. ಕೂಲಿ ಮಾಡಲು ಗುಳೆ ಹೊರಟ ಬಂಜಾರ ಸಮಾಜಕ್ಕೆ ಈ ವರದಿ ಅನುಷ್ಠಾನದಿಂದ ಭಾರೀ ಪೆಟ್ಟು ನೀಡಿದೆ. ಇನ್ನೂ ಕೊರಚ, ಕೊರಮ, ಬೋವಿ ಸಮುದಾಯಗಳ ಸ್ಥಿತಿಯೂ ಭಿನ್ನವಾಗಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ವರದಿಯನ್ನು ಅನುಷ್ಠಾನ ಮಾಡದೇ, ಈ ಸಮುದಾಯಗಳ ನಡುವೆ ಒಗ್ಗಟ್ಟು ಮೂಡಿಸಬೇಕಿತ್ತು ಎಂದು ಹೇಳಿದರು.
ಈಗ ರಾಜ್ಯ ಸರ್ಕಾರ ಎಡಗೈ ಸಮುದಾಯಕ್ಕೆ ಶೇ.6, ಬಲಗೈ ಸಮುದಾಯಕ್ಕೆ ಶೇ.6 ಮತ್ತು ಬಂಜಾರ, ಬೋವಿ, ಕೊರಚ, ಕೊರಮ, ಅಲೆಮಾರಿ ಸೇರಿದಂತೆ ಇತರೆ ಸಮುದಾಯಗಳಿಗೆ ಶೇ.5ರಷ್ಟು ಮೀಸಲಾತಿ ಒದಗಿಸಿದೆ. ಬಂಜಾರ ಸಮುದಾಯ ತೀರಾ ಹಿಂದುಳಿದಿದೆ. ಅಲೆಮಾರಿ ಸಮುದಾಯಗಳ 59 ಸಮುದಾಯಗಳು, ಬುಡ್ಗ ಜಂಗಮ, ಬೇಡ ಜಂಗಮ ಕೂಡ ಶೇ.5ರ ಪಟ್ಟಿಯಲ್ಲೇ ಸೇರಿಸಲಾಗಿದೆ. 65 ಸಮುದಾಯಗಳಿಗೆ ಶೇ.5ರಷ್ಟು ಮೀಸಲಾತಿ ಒದಗಿಸಿರುವುದು ಸರಿಯಲ್ಲ. ಈ ಹಿಂದಿನ ಬೊಮ್ಮಾಯಿ ಸರ್ಕಾರ ಮಾಧುಸ್ವಾಮಿ ವರದಿಯಂತೆ ಶೇ. 4.5ರಷ್ಟು ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯಗಳಿಗೆ ಹಂಚಿಕೆ ಮಾಡಿತ್ತು. ಈಗ ಬೇಡ, ಬುಡ್ಗ ಜಂಗಮ ಸೇರಿದಂತೆ 59 ಅಲೆಮಾರಿ ಸಮುದಾಯಗಳನ್ನು ಸೇರ್ಪಡೆಗೊಳಿಸಿ ಶೇ. 5ರಷ್ಟು ಮಾತ್ರ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಇದರಿಂದ ಲಂಬಾಣಿ ಸೇರಿದಂತೆ ನಮ್ಮ ಸಹೋದರ ಸಮುದಾಯಗಳಿಗೆ ಭಾರೀ ಅನ್ಯಾಯ ಆಗಿದೆ.
ಈ ವರದಿ ಅನುಷ್ಠಾನವನ್ನು ಸಿದ್ದರಾಮಯ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದರು.
ನಗರದ ಬಸ್ ನಿಲ್ದಾಣದ ಎದುರು ಸಂಚಾರ ತಡೆ ನಡೆಸಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಬಳಿಕ ಪುನೀತ್ ರಾಜ್‌ಕುಮಾರ ವೃತ್ತದಲ್ಲಿ ಇಬ್ಬರು ಪ್ರತಿಭಟನಾಕಾರರು ತಲೆ ಬೋಳಿಸಿಕೊಂಡು ಪ್ರತಿಭಟಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪೋಸ್ಟರ್ ಹಿಡಿದು ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಕೂಡ ನಡೆಯಿತು.
ಬಳಿಕ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ದೂಪದಹಳ್ಳಿಯ ಶ್ರೀ ಶಿವಪ್ರಕಾಶ ಮಹಾರಾಜ, ಸಂಡೂರಿನ ಶ್ರೀ ತಿಪ್ಪೇಸ್ವಾಮಿ, ಶ್ರೀ ಮಂಜುನಾಥ ಸ್ವಾಮಿ, ಶ್ರೀ ಗೋಸಾಯಿ ಬಾಬಾ, ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಆರ್.ರಾಮಜೀನಾಯ್ಕ್, ಬೋವಿ ಸಮಾಜದ ಜಿಲ್ಲಾಧ್ಯಕ್ಷ ಪಿ.ಎಚ್. ದೊಡ್ಡ ರಾಮಣ್ಣ, ಮುಖಂಡರಾದ ಡಿ.ಲಾಲ್ಯಾ ನಾಯ್ಕ, ಕುಮಾರನಾಯ್ಕ್, ಹೀರಿಯಾ ನಾಯ್ಕ, ಅಮಾಜಿ ಹೇಮಣ್ಣ, ಅಂಜಿನಿ, ತಿಪ್ಪೇಸ್ವಾಮಿ, ವಿನಾಯಕ ಭಜಂತ್ರಿ, ಹುಲುಗಪ್ಪ, ಶಿವು ನಾಯ್ಕ, ಮೋದಿ ಹನುಮನಾಯ್ಕ, ಲಿಂಬ್ಯಾ ನಾಯ್ಕ, ರಾಮು ನಾಯ್ಕ, ರವೀಂದ್ರ ನಾಯ್ಕ, ಕಾಶಿನಾಥ ನಾಯ್ಕ, ಸುಭಾಷ್ ನಾಯ್ಕ, ಶಾಮಾ ನಾಯ್ಕ, ಪ್ರಕಾಶ ನಾಯ್ಕ, ಪವಿತ್ರಾಬಾಯಿ, ಡಿ. ಶಿಲ್ಪಾ ನಾಯ್ಕ, ವೀರ ಸಿಂಗ ನಾಯ್ಕ, ಚೇತನ್ ನಾಯ್ಕ, ಮಣಿಕಂಠ, ಸೋಮು, ಗೋವಿಂದ ನಾಯ್ಕ, ರಘು ನಾಯ್ಕ ಸೇರಿದಂತೆ ಇತರರು ಇದ್ದರು.
ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು.
ಡಿವೈಎಸ್ಪಿ ಡಾ. ಮಂಜುನಾಥ ತಳವಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
More Stories
ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸೆ. 18 ರಂದು ಆರೋಗ್ಯ ತಪಾಸಣಾ ಶಿಬಿರ
ದಾನಿ ಸುಬ್ಬಾರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಂಪಾಪಟ್ಟಣ ನಾಗರಿಕರು..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆ