ಜೂಡಿ ನ್ಯೂಸ್ :
ಕೊಪ್ಪಳ: ಯುವಜನತೆ ಅಧ್ಯಾತ್ಮದ ಹಾದಿಯಲ್ಲಿ ಸಾಗಿದರೆ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಹೇಳಿದರು.
ಕಿನ್ನಾಳ ಗ್ರಾಮದಲ್ಲಿ ಮಂಗಳವಾರ ಹನುಮ ಮಾಲಾಧಾರಿಗಳಿಂದ ಆಯೋಜನೆಗೊಂಡ ಸಂಕೀರ್ತನಾ ಯಾತ್ರೆಯಲ್ಲಿ ಹನುಮ ಮಾಲಾಧಾರಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
“ಆಧ್ಯಾತ್ಮ ಹಾಗೂ ಧಾರ್ಮಿಕ ಆಚರಣೆಗಳು ಮನುಷ್ಯನಲ್ಲಿ ಸಾತ್ವಿಕತೆಯನ್ನು ಬೆಳೆಸುತ್ತವೆ. ಸರಿ ತಪ್ಪುಗಳ ವ್ಯತ್ಯಾಸ ತಿಳಿಸಿ ಸರಿಯಾದ ಹಾದಿಯಲ್ಲಿ ಕ್ರಮಿಸುವಂತೆ ಮಾಡುತ್ತವೆ. ದೈಹಿಕ, ಮಾನಸಿಕ ಮತ್ತು ಮನೋವೈಜ್ಞಾನಿಕ ಆರೋಗ್ಯವನ್ನು ವೃದ್ಧಿಗೊಳಿಸುತ್ತವೆ. ಇವೆಲ್ಲ ಒಟ್ಟಾಗಿ ಆರೋಗ್ಯವಂತ ಸಮಾಜ ಕಟ್ಟಲು ನೆರವಾಗುತ್ತವೆ. ಆದ್ದರಿಂದ ಯುವಕರು ಆಧ್ಯಾತ್ಮದ ಹಾದಿಯಲ್ಲಿ ಕ್ರಮಿಸಬೇಕು,” ಎಂದು ಹೇಳಿದರು.
ಭಾರತ ಅನೇಕ ಧರ್ಮಗಳ, ಆಧ್ಯಾತ್ಮದ ಅನುಭೂತಿಗಳ ಹಾಗೂ ವಿವಿಧ ಆಚರಣೆಗಳ ತವರೂರು. ಎಲ್ಲಾ ಧರ್ಮ ಅಥವಾ ಪಂಥಗಳು ತಮ್ಮದೇ ಆಚರಣೆಗಳನ್ನು ಹೊಂದಿವೆ. ತಮಗೆ ಸರಿ ಅನ್ನಿಸುವ ಧರ್ಮ ಮತ್ತು ಆಚರಣೆಗಳನ್ನು ಪಾಲಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅದನ್ನು ಪಾಲಿಸುವುದರಿಂದ ಧರ್ಮ ರಕ್ಷಣೆ ಮತ್ತು ದೇಶ ರಕ್ಷಣೆ ಎರಡು ಆಗುತ್ತದೆ ಎಂದರು.
ವಿಜಯನಗರ ಕಾಲೋನಿಯ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ಸಂಕೀರ್ತನಾ ಯಾತ್ರೆ ಆರಂಭಗೊಂಡು ಮುಖ್ಯಬೀದಿಗಳಲ್ಲಿ ಸಾಗಿ ಪುನಃ ಮಾರುತೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಯಾತ್ರೆಯಲ್ಲಿ ಸಿವಿಸಿ ಪಲ್ಲಕ್ಕಿ ಸೇವೆ ನಿರ್ವಹಿಸಿದರು. ಮಾಲಾಧಾರಿಗಳು ಧಾರ್ಮಿಕ ಘೋಷಣೆಗಳನ್ನು ಕೂಗಿದರು. ಶ್ರೀರಾಮ ಜಪ ಮಾಡಿದರು.

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ