January 31, 2026

ಈ ಭಾಗದ ರೈತರಿಗೆ ಮಹಾಮೋಸ ಮಾಡಿದ ಕಾಂಗ್ರೆಸ್ : ಸಿವಿಸಿ

ಜೂಡಿ ನ್ಯೂಸ್ :

ಕೊಪ್ಪಳ: ರಾಜ್ಯ ಸರಕಾರ ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್ ಗೇಟ್ ಗಳನ್ನು ಬದಲಾಯಿಸಲು ನೀಡಿದ ಮೊದಲನೇ ಕಂತಿನ 10 ಕೋಟಿ ರೂಪಾಯಿಗಳನ್ನು ವಾಪಸ್ ಪಡೆದಿರುವುದು ಅಕ್ಷಮ್ಯ.

ಸರಕಾರ ಹಣ ವಾಪಸ್ ಪಡೆದು ಈ ಭಾಗದ ರೈತರಿಗೆ ಅನ್ಯಾಯ ಮಾಡಿರುವ ವಿಷಯ ತಿಳಿದಿದ್ದರೂ ಸಹ ಕಾಂಗ್ರೆಸ್ ಪಕ್ಷದ ಮುಖಂಡರು ಮೌನವಾಗಿರುವುದು ಜನತೆಗೆ ಮಾಡಿದ ಮಹಾ ಮೋಸ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸರಕಾರ ಕೊಟ್ಟ ಹಣ ವಾಪಸ್ ಪಡೆದಿರುವ ವಿಷಯವನ್ನು ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಅವರೇ ಒಪ್ಪಿಕೊಂಡಿದ್ದಾರೆ. ಕ್ರೆಸ್ಟ್ ಗೇಟ್ ತಜ್ಞ ಕನ್ಹಯ್ಯ ನಾಯ್ಡು ಈ ಕಾಮಗಾರಿಯ ಕೆಲಸವನ್ನು ಪರಿಶೀಲಿಸುವ ಸಂದರ್ಭದಲ್ಲಿ ರಾಜ್ಯ ಸರಕಾರ 10 ಕೋಟಿ ರೂಪಾಯಿ ಕೊಟ್ಟ ಹಣವನ್ನು ವಾಪಸ್ ಪಡೆದಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ರಾಜ್ಯ ಸರಕಾರದ ಈ ನಡೆ ಗುತ್ತಿಗೆದಾರರಿಗೆ ಸಮಸ್ಯೆ ಮಾಡಿದೆ. ಕೆಲಸ ಆಮೆ ಗತಿ ವೇಗದಲ್ಲಿ ಸಾಗುತ್ತಿದೆ. ಈಗ ನಡೆಯುತ್ತಿರುವ ಕೆಲಸದ ರೀತಿ ನೋಡಿದರೆ ಜೂನ್ ತಿಂಗಳ ಒಳಗಾಗಿ ಎಲ್ಲಾ 33 ಕ್ರೆಸ್ಟ್ ಗೇಟ್ ಬದಲಾಯಿಸಲು ಸಾಧ್ಯವಿಲ್ಲವೆಂದುಷರಾಜ್ಯ ಸರಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಂಧ್ರ ಪ್ರದೇಶ ಸರಕಾರ ತನ್ನ ಪಾಲಿನ 35 ಕೋಟಿ ರೂಪಾಯಿ ನೀಡಿರುವುದನ್ನು ಸಭೆಯಲ್ಲಿ ಉಲ್ಲೇಖಿಸಿದ್ದಾರೆ. ಕ್ರೆಸ್ಟ್ ಗೇಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಆಂಧ್ರ ಪ್ರದೇಶ ಸರಕಾರಕ್ಕೆ ಇರುವ ಕಾಳಜಿ ಕರ್ನಾಟಕ ಸರಕಾರಕ್ಕೆ ಇಲ್ಲದಿರುವುದು ದುರಂತ,” ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಈ ಪ್ರಕರಣ ರಾಜ್ಯ ಸರಕಾರದ ಆರ್ಥಿಕ ದಿವಾಳಿತನವನ್ನು ತೋರಿಸುತ್ತದೆ. ಅವಜ್ಞಾನಿಕ ಯೋಜನೆಗಳಿಂದ ಆರ್ಥಿಕ ಅಶಿಸ್ತು ಮಿತಿ ಮೀರಿದೆ. ಸರಕಾರಕ್ಕೆ ಕನಿಷ್ಠ ಸೌಲಭ್ಯ ಒದಗಿಸಲು ಹಣ ಇಲ್ಲದಾಗಿದೆ. ಕೊಪ್ಪಳದ ಕಾರ್ಖಾನೆಗಳ ವಿಷಯದಲ್ಲಿ ಜಿಲ್ಲೆಯ ಆಡಳಿತ ಪಕ್ಷದ ಶಾಸಕರು ಮತ್ತು ಸಂಸದರು ಮೌನ ತಾಳಿದಂತೆಯೇ ತುಂಗಭದ್ರಾ ಅಣೆಕಟ್ಟೆಯ ವಿಷಯದಲ್ಲಿಯೂ ಮೌನಕ್ಕೆ ಶರಣಾಗಿದ್ದಾರೆ. ಈ ವಿಷಯ ಕುರಿತು ಶೀಘ್ರದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಸೇರಿದಂತೆ ಈ ಭಾಗದ ನಮ್ಮ ಪಕ್ಷದ ಶಾಸಕರು, ಮಾಜಿ ಸಚಿವರು ಹಾಗೂ ರಾಜ್ಯ ಮುಖಂಡರು ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಸರಕಾರದ ಈ ನಡೆ ವಿರುದ್ಧ ಈ ಭಾಗದಲ್ಲಿ ವ್ಯಾಪಕ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.