July 13, 2025

ಡಾ. ಪರಮೇಶ್ವರಯ್ಯ ಸೊಪ್ಪಿಮಠ ಅವರ ಲೇಖನ ರಾಯಚೂರ ವಿವಿಯ ಪಠ್ಯದಲ್ಲಿ

ಜೂಡಿ ನ್ಯೂಸ್ :

ಹಗರಿಬೊಮ್ಮನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಡಾ. ಪರಮೇಶ್ವರಯ್ಯ ಸೊಪ್ಪಿಮಠ ಅವರ ಲೇಖನ ರಾಯಚೂರು ವಿಶ್ವವಿದ್ಯಾಲಯದ 2024-25ನೇಶೈಕ್ಷಣಿಕ ವರ್ಷದ ಬಿ.ಎ/ಬಿ.ಬಿ.ಎ/ಬಿ.ಎಸ್.ಡಬ್ಲ್ಯೂ ಪ್ರಥಮ ಸೆಮಿಸ್ಟರ್‌ನ ಕಲಾ ಕಣಜ-1ರ ಪಠ್ಯಪುಸ್ತಕಕ್ಕೆ ಆಯ್ಕೆಯಾಗಿದೆ. ಈ ಪಠ್ಯಪುಸ್ತಕವನ್ನು ಡಾ.ಜೋಗಿನಕಟ್ಟಿ ಮಂಜುನಾಥ ಮತ್ತು ಡಾ.ಪಿ.ಅಶೋಕಕುಮಾರ ಮಟ್ಟಿ ಅವರು ಸಂಪಾದಿಸಿದ್ದಾರೆ. ಈ ಮುಂಚೆಯೂ ಸೊಪ್ಪಿಮಠ ಅವರ ಲೇಖನವು ಗುಲ್ಬರ್ಗಾ ವಿಶ್ವ ವಿದ್ಯಾಲಯದ ದ್ವಿತೀಯ ಬಿ.ಎಸ್.ಸಿ. ಕನ್ನಡ ಪಠ್ಯವಾದ ವೈಜ್ಞಾನಿಕ ಪ್ರಬಂಧಗಳು ಪುಸ್ತಕದಲ್ಲಿದ್ದು, ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದಾರೆ. ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ 6ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ “ರವೀಂದ್ರನಾಥ್ ಟ್ಯಾಗೋರ್” ಲೇಖನ ಆಯ್ಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಸ್ತುತ ಬಿ.ಆರ್.ಸಿಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿರುವ ಡಾ.ಸೊಪ್ಪಿಮಠ ಅವರು ಶೈಕ್ಷಣಿಕ, ಸಾಹಿತ್ಯ, ಸಮಾಜಸೇವೆ ಮತ್ತು ಸಂಘಟನೆಗಳಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಅದರಲ್ಲೂ ಓದುವ ಮತ್ತು ಬರವಣಿಗೆ ಹವ್ಯಾಸದ ಮೂಲಕ ಹೆಚ್ಚು ಗಮನ ಸೆಳೆದಿದ್ದಾರೆ. ಕನ್ನಡ ಮತ್ತು ಪತ್ರಿಕೋದ್ಯವ್ಯದಲ್ಲಿ ಎಂ.ಎ. ಪದವಿ ಪಡೆದ ನಂತರ “ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ “ವಿಷಯದ ಮೇಲೆ ಹಂಪಿ ವಿವಿಯಲ್ಲಿ ಪಿಹೆಚ್.ಡಿ. ಪದವಿಯನ್ನೂ ಪಡೆದಿದ್ದಾರೆ.

ಇವರ 700ಕ್ಕೂ ಹೆಚ್ಚು ಲೇಖನಗಳು ರಾಜ್ಯದ ಎಲ್ಲಾ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವು ಒಷ್ಟದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ವ್ಯಕ್ತಿ-ಪರಿಚಯ ಮಕ್ಕಳು, ವಿಜ್ಞಾನ, ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಐತಿಹಾಸಿಕ, ಮಹಿಳೆ, ಕೃಷಿ ಹತ್ತು ಹಲವು ಕ್ಷೇತ್ರಗಳಲ್ಲಿ ಇವರ ಲೇಖನ ಪ್ರಕಟವಾಗಿವೆ.

ಇವರು ಬರೆದ ಪುಸ್ತಕಗಳೂ ಒಮದಕ್ಕಿಂತ ಒಂದು ಭಿನ್ನವಾಗಿವೆ. ಹ.ಬೊ.ಹಳ್ಳಿ ತಾಲೂಕಿನ ಸಮಗ್ರತೆಯನ್ನು ಸಂಗ್ರಹಿಸಿ, ಪರಿಚಯಿಸಿದ “ಹಗರಿಬೊಮ್ಮನಹಳ್ಳಿ ತಾಲೂಕು ದರ್ಶನ”, ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನವು ಪ್ರಕಟಿಸಿದ “ತರಗತಿ ನಿರ್ವಹಣ ತಂತ್ರಗಳು”, ಶೈಕ್ಷಣಿಕ ಲೇಖನಗಳ ಸಂಗ್ರಹದ ಗುಚ್ಛ “ತಿಳಿವಿನ ತುತ್ತು”. ನಾಡಿನ ಖ್ಯಾತ ಸಾಹಿತಿಗಳಾದ ಎಂ.ವಿ.ಚಕ್ರಪಾಣಿಯವರ (ಎಂ.ವೆಂಕಟಕೃಷ್ಣುವರ ಜೀವನ ಚರಿತ್ರೆಯ ಕುರಿತಾದ “ಆರಿದ ಸಾರಿದ ಎಂ.ವಿ.ಚಕ್ರಪಾಣಿ”, ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಗಾಗಿ ಶಿಕ್ಷಣ ಲೇಖನಗಳ ಸಂಪಾದನೆ ಮಾಡಿದ “ಶಿಕ್ಷಣ ವಿಕಾಸ-2009”, ಹಂಪಿ ಕನ್ನಡ ವಿ.ವಿ.ಯು ಇವರು ಬರೆದ “ಅಕ್ಕ ಮಹಾದೇವಿ ಕಂಡಂತೆ ಬಸವಣ್ಣ” ಪುಸ್ತಕವನ್ನು ಪ್ರಕಟಿಸಿದೆ. ಕರ್ನಾಟಕ ಮೇರು ಚೇತನವಾದ “ಎಂ.ಪಿ.ಪ್ರಕಾಶ್” ಅವರ ಕುರಿತು ಮಕ್ಕಳಿಗಾಗಿ ರಚಿಸಿದ ಕಿರು ಹೊತ್ತಿಗೆ, ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಬರೆದ “ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು”. ನಾಡಿನ ಸಾಧಕರ ನೆನಪಿಸುವ ಸಲುವಾಗಿ ಅವರ ಬದುಕನ್ನು ಇಂದಿನವರಿಗೆ ಮತ್ತೆ ನೆನಪಿಸುವಂತಹ “ಎಣೆಯಿಲ್ಲದಾಗಸಕೆ”, ಕನ್ನಡದ ಹೋರಾಟಗಾರರ ರೋಚಕ ಬದುಕನ್ನು ಆಧರಿಸಿದ “ಕನ್ನಡ ಕಹಳೆ” ಕೃತಿ ನಾಡಿನೆಲ್ಲೆಡೆ ಸದ್ದು ಮಾಡಿದೆ. ಮಕ್ಕಳಿಗೆ ಮತ್ತು ಪಾಲಕರಿಗೆ ಮಾರ್ಗದರ್ಶನ ಮಾಡುವಂತ ಶಿಕ್ಷಣ ದೀವಿಗೆ’ ಹಾಗೂ

ಶಿಕ್ಷಕರಿಗೆ ಕೈಪಿಡಿಯಾಗುವಂತೆ ‘ಅರಿವಿನ ಹರಿಗೋಲು’ ಕೃತಿಗಳನ್ನು ರಚಿಸಿದ್ದಾರೆ. ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಬೆಳೆಸುವಂತಹ ‘ಹಸಿರುಡುಗೆ’ ಮಕ್ಕಳ ಕಾದಂಬರಿ, 2022ರಲ್ಲಿ ನವಕರ್ನಾಟಕದವರು ಪ್ರಕಟಿಸಿರುವ “ಟ್ರಸ್ ಟ್ರಕ್ ಹಲೋ ಮಕ್ಕಳ ಸಹಾಯವಾಣಿ” ಕೃತಿ ಮಕ್ಕಳ ಹಕ್ಕುಗಳ ಲೋಕದಲ್ಲಿ ಹೊಸ ಮೈಲುಗಲ್ಲಾಗಿ, ಎರಡು ವರ್ಷದಲ್ಲಿಯೇ ನಾಲ್ಕು ಮುದ್ರಣಗೊಂಡಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇತ್ತೀಚಿನ ಇವರ “ಮೊಗ್ಗು ಅರಳುವ ಸಮಯ” ಕೃತಿಯು ಪಾಲಕರಿಗೆ ಮಕ್ಕಳ ಬೆಳವಣಿಗೆ ಕುರಿತಾಗಿ ಕಿವಿಮಾತು ಹೇಳುವ ರೀತಿಯಲ್ಲಿ ಕಾಣಿಸುತ್ತದೆ.

ಡಾ.ಸೊಪ್ಪಿಮಠ ಅವರು ವಿಶ್ವಚಿ, ಗುಬ್ಬಚ್ಚಿಗೂಡು ಮಾಸ ಪತ್ರಿಕೆಗಳ ಸಂಪಾದಕ ಮಂಡಳಿ ಸದಸ್ಯರಾಗಿದ್ದಾರೆ. ಜಿಲ್ಲಾ ಹಾಗೂ ರಾಜ್ಯ ಹಂತದ ನೂರಾರು ಕಾರ್ಯಕ್ರಮಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಅನೇಕ ತರಬೇತಿಗಳನ್ನು ನೀಡಿದ್ದಾರೆ. ಗಣಿತ ಪಠ್ಯಮಸ್ತಕ ಮತ್ತು ಅಭ್ಯಾಸ ಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಮುಖ್ಯಸರಾಗಿ ಕೆಲಸ ಮಾಡಿದ್ದಾರೆ. ಅನೇಕ ತರಬೇತಿ ಸಾಹಿತ್ಯಗಳ ರಚನೆಯಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ. ಆಕಾಶವಾಣಿಯ ರೇಡಿಯೋ ಪಾಠ, ಚಿಂತನ, ಸಂವಾದ, ನೇರ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದಾರೆ. ಪ್ರಸ್ತುತ ಅಖಂಡ ಬಳ್ಳಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿಗಳಾಗಿದ್ದಾರೆ.

ಡಾ.ಸೊಪ್ಪಿಮಠ ಅವರ ಕೆಲಸಕ್ಕೆ ಕೈಗನ್ನಡಿ ಎನ್ನುವಂತೆ ಜೆ.ಸಿ. ಬೆಂಗಳೂರಿನ ರಾಜ್ಯ ಗುರು ಪುರಸ್ಕಾರ. ಗುಲ್ಬರ್ಗದ ಉದಯೋನ್ಮುಖ ಬರಹಗಾರರ ಸಂಘದ ಉದಯೋನ್ಮುಖ ಬರಹಗಾರ, ಸ.ಜ. ನಾಗಲೋಟಿಮಠ ಅಂತರಾಷ್ಟ್ರೀಯ ಪ್ರತಿಷ್ಠಾನದ ರಾಜ್ಯ ಆದರ್ಶ ಶಿಕ್ಷಕ, ರಾಯಚೂರು ವಿಜ್ಞಾನ ಕೇಂದ್ರದಿಂದ ಉತ್ತಮ ಶಿಕ್ಷಕ, ಗುಬ್ಬಚ್ಚಿಗೂಡು ಮತ್ತು ಕರ್ನಾಟಕ ಬಾಲ ವಿಕಾಸ ಅಕಾಡೆಮಿ “ಶಿಕ್ಷಣ ಸಿರಿ”, ಕನ್ನಡ ಕಹಳೆ ಕೃತಿಗೆ 2020ರ ಪ್ರತಿಷ್ಠಿತ ಅಜೂರು ಪ್ರಶಸ್ತಿ, 2021ನೇ ಸಾಲಿನ ಕರ್ನಾಟಕ ಸರಕಾರದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಇವರ “ಹಸಿರುಡುಗೆ: ಮಕ್ಕಳ ಕಾದಂಬರಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿಯ 2021ನೇ ಸಾಲಿನ ಅತ್ಯುತ್ತಮ ಮಕ್ಕಳ ಕಾದಂಬರಿ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಸಂಘ-ಸಂಸ್ಥೆಗಳ ಗೌರವ-ಸನ್ಮಾನಗಳಿಗೆ ಭಾಜನರಾಗಿದ್ದಾರೆ.

ಡಾ. ಪರಮೇಶ್ವರಯ್ಯ ಸೊಪ್ಪಿಮಠ ಅವರ ಲೇಖನ ರಾಯಚೂರು ವಿಶ್ವವಿದ್ಯಾಲಯದ ಪಠ್ಯಮಸ್ತಕಕ್ಕೆ ಆಯ್ಕೆಯಾಗಿದ್ದಕ್ಕೆ ಬಿ.ಇ.ಓ ಮೈಲೇಶ ಬೇವೂರು, ಬಿ.ಆರ್.ಸಿ ಎಂ.ಎಸ್.ಪ್ರಭಾಕರ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಲೋಕಪ್ಪ, ಜಿಲ್ಲಾ ಎಸ್ಸಿ-ಎಸ್ಟಿ ನೌಕರರ ಸಂಘದ ಅಧ್ಯಕ್ಷ ಟಿ.ಸೋಮಶೇಖರ, ಜನನಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಅಂಬಳಿ ಕೇಶವಮೂರ್ತಿ, ಬಿಜಿವಿಎಸ್ ಅಧ್ಯಕ್ಷ ಮುಸ್ತಾಕ್ ಅಹ್ಮರ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇವರನ್ನು ಅಭಿನಂದಿಸಿದ್ದಾರೆ.