ಜೂಡಿ ನ್ಯೂಸ್ :
ಬೆಂಗಳೂರು ಮತ್ತು ಬೀದರ್ ಗೆ ಸ್ಲೀಪರ್ ಬಸ್‌ಗಳ ಆರಂಭ ಕೊಪ್ಪಳದಿಂದ ಶೀಘ್ರ
ಕೊಪ್ಪಳ: ಜಿಲ್ಲಾ ಕೇಂದ್ರ ಕೊಪ್ಪಳದಿಂದ ಬೆಂಗಳೂರು ಹಾಗೂ ಬೀದರ್ ನಗರಗಳಿಗೆ ಸ್ಲೀಪರ್ ಬಸ್‌ಗಳು ಹಾಗೂ ಕೊಪ್ಪಳದಿಂದ ಬೆಂಗಳೂರಿಗೆ ಬೆಳಗಿನ ಜಾವ ಬಸ್ ಸಂಚಾರಕ್ಕೆ ತಕ್ಷಣ ಕ್ರಮ ಕೈಗೊಳ್ಳುವ ಕುರಿತು ಕೆಕೆಆರ್ಟಿಸಿ ಕೊಪ್ಪಳದ ವಿಭಾಗೀಯ ನಿಯಂತ್ರಕರಿಗೆ ಕಳೆದ ವರ್ಷ ಅಕ್ಟೋಬರ್ನಲ್ಲಿ ಮಾಡಿಕೊಂಡ ಮನವಿಗೆ ಸ್ಪಂದನೆ ದೊರಕಿದ್ದು, ಒಟ್ಟು ನಾಲ್ಕು ಸ್ಲೀಪರ್ ಬಸ್‌ಗಳು ಇನ್ನೆರಡು ದಿನಗಳಲ್ಲಿ ರಸ್ತೆಗೆ ಇಳಿಯಲಿವೆ.
ಸಾರ್ವಜನಿಕ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ ಅವರು ಈ ಕುರಿತು ವಿಭಾಗೀಯ ನಿಯಂತ್ರಕರಾದ ವೆಂಕಟೇಶ್ ಅವರನ್ನು ಭೇಟಿಯಾಗಿ, ಈ ಪ್ರಮುಖ ಮಾರ್ಗಗಗಳಲ್ಲಿ ಎಸಿ ಮತ್ತು ನಾನ್-ಎಸಿ ಸ್ಲೀಪರ್ ಬಸ್‌ಗಳು ಸಂಚಾರವನ್ನು ಪುನಾರಂಭಿಸುವ ಹಾಗೂ ಪ್ರಮಾಣವನ್ನು ಹೆಚ್ಚಿಸುವ ಅವಶ್ಯಕತೆಯನ್ನು ಮನದಟ್ಟು ಮಾಡಿಕೊಟ್ಟಿದ್ದರು.
ಕೊಪ್ಪಳದಿಂದ ಬೆಂಗಳೂರಿಗೆ ಅತ್ಯಧಿಕ ಸಂಖ್ಯೆಯಲ್ಲಿ, ವಾರದ ಎಲ್ಲಾ ದಿನಗಳಲ್ಲಿಯೂ, ಪ್ರಯಾಣಿಕರ ಸಂಚಾರ ಇರುತ್ತದೆ. ಆದರೆ, ಈ ಮಾರ್ಗದಲ್ಲಿ, ಒಂದೇ ಒಂದು ಸ್ಲೀಪರ್ ಬಸ್ಸೂ ಇರುವುದಿಲ್ಲ. ಈ ಮುಂಚೆ, ಕೆಲ ತಿಂಗಳುಗಳ ಹಿಂದೆ ಇದ್ದ ಒಂದೇ ಒಂದು ನಾನ್-ಎಸಿ ಸ್ಲೀಪರ್ ಬಸ್ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ ಎಂಬುದನ್ನು ವಿಭಾಗೀಯ ನಿಯಂತ್ರಕರ ಗಮನಕ್ಕೆ ತರಲಾಗಿತ್ತು.
ಕೊಪ್ಪಳ-ಬೆಂಗಳೂರು ಮಾರ್ಗದಲ್ಲಿ ಎಸಿ ಮತ್ತು ನಾನ್-ಎಸಿ ಸ್ಲೀಪರ್ ಬಸ್‌ಗಳಿಗೆ ಎಷ್ಟು ಬೇಡಿಕೆ ಇದೆಯೆಂದರೆ, ಖಾಸಗಿ ಟ್ರಾವೆಲ್ ಏಜೆನ್ಸಿಗಳು ದಿನಕ್ಕೆ ಅಂತಹ 20 ಬಸ್‌ಗಳು ಕಾರ್ಯಾಚರಿಸುತ್ತಿವೆ. ಈ ಎಲ್ಲ ಬಸ್‌ಗಳೂ ಭರ್ತಿಯಾಗಿಯೇ ಹೋಗುತ್ತಿರುವುದು, ಈ ಮಾರ್ಗಕ್ಕೆ ಇರುವ ಬೇಡಿಕೆಯ ಪ್ರಮಾಣಕ್ಕೆ ನಿದರ್ಶನವಾಗಿದೆ ಎಂದು ಕೃಷ್ಣ ಇಟ್ಟಂಗಿ ವಿವರಿಸಿದ್ದರು.
ಆದರೆ, ಖಾಸಗಿ ಟ್ರಾವೆಲ್ ಏಜೆನ್ಸಿಗಳು ಹಬ್ಬ, ಸಾಲುಸಾಲು ಸಾರ್ವತ್ರಿಕ ರಜಾದಿನಗಳು, ಹಾಗೂ ವಾರಾಂತ್ಯದಲ್ಲಿ ಬೇಕಾಬಿಟ್ಟಿಯಾಗಿ ದರಗಳನ್ನು ಹೆಚ್ಚಿಸುತ್ತವೆ. ಇದನ್ನು ತಡೆಗಟ್ಟಲು ತಮ್ಮ ಇಲಾಖೆಯೂ ಸೇರಿದಂತೆ ಇತರ ಇಲಾಖೆಗಳು ಯಾವುದೇ ಪರಿಣಾಮಕಾರಿ ಕ್ರಮವನ್ನು ಕೈಗೊಂಡಿರುವುದಿಲ್ಲ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಸ್ಲೀಪರ್ ಬಸ್‌ಗಳ ಅನುಪಸ್ಥಿತಿಯಿಂದಾಗಿ, ಖಾಸಗಿ ಟ್ರಾವೆಲ್ ಏಜೆನ್ಸಿಗಳ ಸುಲಿಗೆಗೆ ತಮ್ಮ ಸಂಸ್ಥೆಯೇ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅವಕಾಶ ಮಾಡಿಕೊಟ್ಟಂತಾಗಿದೆ. ಸಾರಿಗೆ ನಿಗಮವೇ ಈ ಖಾಸಗಿ ಟ್ರಾವೆಲ್ ಏಜೆನ್ಸಿಗಳ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡು ಕೊಪ್ಪಳ-ಬೆಂಗಳೂರು ಮಾರ್ಗವಾಗಿ ಸ್ಲೀಪರ್ ಬಸ್‌ಗಳನ್ನು ರದ್ದುಗೊಳಿಸಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ ಎಂಬ ವಿಷಯವನ್ನು ವಿಭಾಗೀಯ ನಿಯಂತ್ರಕರ ಗಮನಕ್ಕೆ ತರಲಾಗಿತ್ತು.
ಈ ಕುರಿತ ಮನವಿ ಪತ್ರವನ್ನು ಕೊಪ್ಪಳ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರಿಗೂ ಸಲ್ಲಿಸಿ, ಈ ಕುರಿತು ಕೆಕೆಆರ್ಟಿಸಿಯ ಹಿರಿಯ ಅಧಿಕಾರಿಗಳ ಗಮನ ಸೆಳೆದು, ಬಸ್ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು.
ಶಾಸಕರು ಈ ವಿಷಯವನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಕ್ಕೆ ತಂದ ಹಿನ್ನೆಲೆಯಲ್ಲಿ, ಕೆಕೆಆರ್ಟಿಸಿ ಈಗ ನಾಲ್ಕು ಸ್ಲೀಪರ್ ಬಸ್‌ಗಳನ್ನು ಎರಡು ಮಾರ್ಗಗಳಲ್ಲಿ ಸಂಚಾರಕ್ಕೆ ಒದಗಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಹೊಸ ಸ್ಲೀಪರ್ ಬಸ್‌ಗಳಲ್ಲಿ ಎರಡು ಕೊಪ್ಪಳ-ಬೀದರ್ ಮಾರ್ಗದಲ್ಲಿ ಹಾಗೂ ಇನ್ನೆರಡು ಕೊಪ್ಪಳ-ಬೆಂಗಳೂರು ಮಾರ್ಗದಲ್ಲಿ ಇನ್ನೆರಡು ದಿನಗಳಲ್ಲಿ ಕಾರ್ಯಾರಂಭ ಮಾಡಲಿವೆ.
ಮನವಿಗೆ ಸ್ಪಂದಿಸಿ ಕ್ರಮ ಕೈಗೊಂಡ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹಾಗೂ ಕೊಪ್ಪಳದ ಕೆಕೆಆರ್ಟಿಸಿ ವಿಭಾಗೀಯ ನಿಯಂತ್ರಕರಾದ ವೆಂಕಟೇಶ್ ಅವರಿಗೆ ಕೃಷ್ಣ ಇಟ್ಟಂಗಿ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ