July 13, 2025

ಓಬಳಾಪುರ ಮೈನಿಂಗ್ ಕಂಪನಿ ಪ್ರಕರಣದಲ್ಲಿ ಹೈದರಾಬಾದಿನ ಸಿಬಿಐ ವಿಶೇಷ ನ್ಯಾಯಾಲಯವು ಜನಾರ್ಧನ ರೆಡ್ಡಿ’ಗೆ 7 ವರ್ಷ ಜೈಲು ಶಿಕ್ಷೆ ಘೋಷಣೆ

ಜೂಡಿ ನ್ಯೂಸ್ :

ಓಬಳಾಪುರ ಮೈನಿಂಗ್ ಕಂಪನಿ ಪ್ರಕರಣದಲ್ಲಿ ಹೈದರಾಬಾದಿನ ಸಿಬಿಐ ವಿಶೇಷ ನ್ಯಾಯಾಲಯವು ಜನಾರ್ಧನ ರೆಡ್ಡಿ’ಗೆ 7 ವರ್ಷ ಜೈಲು ಶಿಕ್ಷೆ ಘೋಷಣೆ

ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳೆರಡಕ್ಕೂ ಮೋಸ ಮಾಡಿ, ದಬ್ಬಾಳಿಕೆ, ದುರ್ವರ್ತನೆ ತೋರಿ, ನೈಸರ್ಗಿಕ ಸಂಪತ್ತನ್ನು ಹಾಡುಹಗಲಲ್ಲಿ ದರೋಡೆ ಮಾಡಿ, ಎಲ್ಲವನ್ನೂ ದಕ್ಕಿಸಿಕೊಳ್ಳುತ್ತೇನೆ ಎಂದು ಮೆರೆದು, ತಿರುಪತಿ ತಿಮ್ಮಪ್ಪನಿಗೂ ಆ ಕಾಲಕ್ಕೇ ನಲವತ್ತು ಕೋಟಿ ರೂಪಾಯಿಯ ಚಿನ್ನದ ಟೋಪಿ ಇಟ್ಟಿದ್ದ #ಗಣಿಕಳ್ಳ ಜನಾರ್ದನ ರೆಡ್ಡಿ ಕಡೆಗೂ ಅಪರಾಧಿ ಎಂದು ನ್ಯಾಯಾಲಯದಲ್ಲಿ ಇಂದು ಸಾಬೀತಾಯಿತು.
ಓಬಳಾಪುರ ಮೈನಿಂಗ್ ಕಂಪನಿ ಪ್ರಕರಣದಲ್ಲಿ ಹೈದರಾಬಾದಿನ ಸಿಬಿಐ ವಿಶೇಷ ನ್ಯಾಯಾಲಯವು ಜನಾರ್ಧನ ರೆಡ್ಡಿ’ಗೆ 7 ವರ್ಷ ಜೈಲು ಶಿಕ್ಷೆ ಘೋಷಣೆ ಮಾಡಿದೆ.
ಅಂತರಗಂಗಮ್ಮಕೊಂಡ’ದ (OMC 3) 68 ಎಕರೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವ ಪ್ರಕರಣವನ್ನು ಆಂಧ್ರ ಪ್ರದೇಶ ಸರ್ಕಾರವು ಹದಿನಾರು ವರ್ಷಗಳ ಹಿಂದೆಯೇ ಸಿಬಿಐ’ಗೆ ವಹಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆಯೇ #CashForBail ನಡೆದದ್ದು. ಅಂದರೆ ಜನಾರ್ಧನ ರೆಡ್ಡಿಯ ತಮ್ಮ ಸೋಮಶೇಖರ ರೆಡ್ಡಿಯು ತನ್ನ ಅಣ್ಣನಿಗೆ ಜಾಮೀನು ನೀಡಿ ಎಂದು ಸಿಬಿಐ ವಿಶೇಷ ನ್ಯಾಯಾಲಯದ ಆಗಿನ ನ್ಯಾಯಮೂರ್ತಿಗೆ ಮತ್ತೊಬ್ಬ ನ್ಯಾಯಮೂರ್ತಿಯ ಮೂಲಕ ಹತ್ತಾರು ಕೋಟಿ ಲಂಚ ಕೊಟ್ಟಿದ್ದ. ಸುದೈವಕ್ಕೆ ಖದೀಮರೆಲ್ಲರೂ ಸಿಕ್ಕಿಬಿದ್ದಿದ್ದರು. ಇನ್ನೂ ಆ ಪ್ರಕರಣ ವಿಚಾರಣೆ ಹಂತದಲ್ಲಿಯೇ ಇದೆ ಅನ್ನಿಸುತ್ತದೆ. (ಆ ಇಬ್ಬರೂ ಅಯೋಗ್ಯ ಮತ್ತು ಭ್ರಷ್ಟ ನ್ಯಾಯಮೂರ್ತಿಗಳು ಈಗಾಗಲೇ ಸತ್ತಿದ್ದಾರೆ ಎಂದು ಇತ್ತೀಚೆಗೆ ಎಲ್ಲೋ ಓದಿದ ನೆನಪು.)
ಈಗ ಜೈಲುಪಾಲಾಗಿರುವ ಪ್ರಕರಣದಲ್ಲಿ ಜನಾರ್ದನ ರೆಡ್ಡಿಯು ಆಂಧ್ರ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಪಡೆದು, ಅಂತರರಾಜ್ಯ ಗಡಿಯನ್ನು ಉಲ್ಲಂಘಿಸಿ, ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಉತ್ಕೃಷ್ಟ ಅದಿರನ್ನು ಅಕ್ರಮವಾಗಿ ಸಾಗಿಸಿರುತ್ತಾರೆ.
ಅಂತೂಇಂತೂ, ಪ್ರಕರಣ ದಾಖಲಾದ ಸುಮಾರು ಹದಿನಾರು ವರ್ಷಗಳ ನಂತರ (ಹದಿನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆದು) ನಮ್ಮ ಘನ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ಅಪರಾಧಿಗಳಿಗೆ ಕೊನೆಗೂ ಶಿಕ್ಷೆಯಾಗಿರುವ ಕಾರಣಕ್ಕೆ ಇದು ಒಂದು ರೀತಿಯಲ್ಲಿ ನಿರಾಳತೆ ತಂದರೂ, ಅಪರಾಧ ಪ್ರಕರಣಗಳ ವಿಲೇವಾರಿ ಇಷ್ಟೊಂದು ಸಮಯ ತೆಗೆದುಕೊಳ್ಳುವುದು ನ್ಯಾಯಾಂಗ ವ್ಯವಸ್ಥೆಗೇ ಅವಮಾನ. ಈ ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ಜನಾರ್ಧನ ರೆಡ್ಡಿಯು ರಾಜಕಾರಣವನ್ನೂ ಮುಂದುವರೆಸಿ ಶಾಸಕನಾಗಿಯೂ ಆಯ್ಕೆಯಾಗಲು ಆಡಿದ ಎಲ್ಲಾ ಆಟಗಳಿಗೆ ನ್ಯಾಯಾಂಗವೇ ನೇರ ಹೊಣೆ. ದೇಶದಲ್ಲಿ ಅಪರಾಧಿಗಳು ಜಾಮೀನು ಪಡೆದು ರಾಜಾರೋಷವಾಗಿ ಓಡಾಡಿಕೊಂಡು ಅಪರಾಧಗಳನ್ನು ಮುಂದುವರೆಸುವ ಎಲ್ಲಾ ಪ್ರಕರಣಗಳಲ್ಲಿ ನ್ಯಾಯಾಂಗದ ಪಾಲೇ ದೊಡ್ಡದು ಮತ್ತು ಈ ವಿಚಾರವಾಗಿ ದೇಶದ ನ್ಯಾಯಾಂಗವು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು.
ಏಳು ವರ್ಷಗಳ ಶಿಕ್ಷೆ ಆಗಿರುವ ಕಾರಣಕ್ಕೆ ಜನಾರ್ದನ ರೆಡ್ಡಿ ಇಂದೇ, ಈಗಾಗಲೇ ಜೈಲು ಸೇರಿರಬೇಕು. ಹಾಗೆಯೇ ಆತನ ಶಾಸಕ ಸ್ಥಾನವೂ ರದ್ದಾಗಿ ಒಂದೆರಡು ದಿನಗಳಲ್ಲಿ ಆತ ಮಾಜಿ ಶಾಸಕ. ಗಂಗಾವತಿ ಕ್ಷೇತ್ರಕ್ಕೆ ಈಗ ಉಪಚುನಾವಣೆಯೂ ಆಗಲಿದೆ ಎನ್ನಿಸುತ್ತದೆ.
– ರವಿ ಕೃಷ್ಣಾರೆಡ್ಡಿ 
ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.