ಜೂಡಿ ನ್ಯೂಸ್ :
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಇಂದು ಕೊಪ್ಪಳದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ಭ್ರಷ್ಟಾಚಾರದ ಆರೋಪಗಳಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡಲಾಯಿತು.
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್ ಕೇಳಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕಾಂಗ್ರೆಸ್ ಸರ್ಕಾರದ ಭ್ರಷ್ಟ ಮುಖವನ್ನು ಬಯಲುಗೊಳಿಸಿವೆ. ವಿಶೇಷವಾಗಿ, ತೈಲೇಶ್ವರ ಗಾಣಿಗ ಮಠಕ್ಕೆ ಮಂಜೂರಾದ ₹3.5 ಕೋಟಿ ಅನುದಾನ ಬಿಡುಗಡೆಗೆ ಕಮೀಷನ್ ಕೇಳಲಾಗಿದೆ ಎಂಬ ಆರೋಪ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಎದ್ದಿದೆ. ಈ ಬಗ್ಗೆ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿಯವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದು ಆರೋಪಗಳನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಈ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸಚಿವರು ತಮ್ಮ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲಾಯಿತು.
ಇದೇ ವೇಳೆ, ಕೊಪ್ಪಳ ಜಿಲ್ಲೆಯ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಸರ್ಕಾರದಿಂದ ನಿರಂತರವಾಗಿ ನಡೆಯುತ್ತಿರುವ ಅನ್ಯಾಯಗಳ ಬಗ್ಗೆಯೂ ಚರ್ಚಿಸಲಾಯಿತು. ಇತ್ತೀಚೆಗೆ ಕೊಪ್ಪಳ ಕ್ಷೇತ್ರದಲ್ಲಿ ಡ್ರಗ್ಸ್ ಪೆಡ್ಲರ್‌ಗಳು ಸಿಕ್ಕಿಬಿದ್ದ ಘಟನೆಯನ್ನು ಗಂಗಾವತಿ ಕ್ಷೇತ್ರಕ್ಕೆ ಕರೆತಂದು ಬಂಧಿಸಲಾಗಿದೆ ಎಂಬುದು ರಾಜಕೀಯ ಪ್ರೇರಿತ ಕೃತ್ಯವಾಗಿದ್ದು, ಗಂಗಾವತಿ ಕ್ಷೇತ್ರಕ್ಕೆ ಅಪಪ್ರಚಾರ ತರಲು ನಡೆದ ಷಡ್ಯಂತ್ರ ಎಂದು ಆರೋಪಿಸಲಾಯಿತು.
ಕಳೆದ ವಿಧಾನಸಭೆ ಅಧಿವೇಶನದಲ್ಲಿ ಹಂಪಿಯಲ್ಲಿ ಪೊಲೀಸ್ ಉಪವಿಭಾಗದ ಕಚೇರಿ ಮತ್ತು ಆನೆಗೊಂದಿ ಭಾಗದಲ್ಲಿ ಪೊಲೀಸ್ ಠಾಣೆ ಸ್ಥಾಪನೆಗೆ ಸಂಬಂಧಿಸಿದಂತೆ ಮಾಡಿದ ಮನವಿಗೆ ಇದುವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಇದರ ಜೊತೆಗೆ, ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನದ ಬಗ್ಗೆಯೂ ಗಮನ ಸೆಳೆಯಲಾಯಿತು. ಪಡಿತರ ಸಾಗಣೆಗೆ ಬಳಸುವ ಲಾರಿಗಳಿಗೆ ಸಕಾಲದಲ್ಲಿ ಪಾವತಿ ಮಾಡದಿರುವುದು ಸರ್ಕಾರದ ದುರ್ಬಲ ಆರ್ಥಿಕ ಸ್ಥಿತಿಯ ಸ್ಪಷ್ಟ ಉದಾಹರಣೆಯಾಗಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ಕುಷ್ಟಗಿ ಶಾಸಕರು ಹಾಗೂ ಪಕ್ಷದ ಮುಖ್ಯ ಸಚೇತಕರಾದ ಶ್ರೀ ದೊಡ್ಡನಗೌಡ ಪಾಟೀಲ್, ಜಿಲ್ಲಾಧ್ಯಕ್ಷರಾದ ಶ್ರೀ ಬಸವರಾಜು ದಡೆಸೂಗೂರು, ರಾಜ್ಯ ಕಾರ್ಯದರ್ಶಿ ಶ್ರೀ ಶರಣು ತಳ್ಳಕೇರಿ, ಮುಖಂಡರಾದ ಶ್ರೀ ಅಯ್ಯಾಳಿ ತಿಮ್ಮಪ್ಪ ಸೇರಿದಂತೆ ಪಕ್ಷದ ಹಲವು ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ
ಹಂಪಾಪಟ್ಟಣದ ನಾಗರಾಜ್ ಗಂಟಿಗೆ ರಾಜ್ಯ ಜಾನಪದ ಯುವ ಸಿರಿ ಪ್ರಶಸ್ತಿ ಪ್ರದಾನ