January 31, 2026

ನಗರ ಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ; ದುರಾಡಳಿತಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ – ಡಾ.ಬಸವರಾಜ ಕ್ಯಾವಟರ್ 

ಜೂಡಿ ನ್ಯೂಸ್ :

ನಗರ ಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ; ದುರಾಡಳಿತಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ – ಡಾ.ಬಸವರಾಜ ಕ್ಯಾವಟರ್ 

ಕೊಪ್ಪಳ: ಕೊಪ್ಪಳ ನಗರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಬಯಲಿಗೆ ಬಂದಿದ್ದು, ಪರಿಶೀಲನೆ ಮಾಡುತ್ತಿದ್ದ ಅಧಿಕಾರಿಯನ್ನೇ ವರ್ಗಾವಣೆ ಮಾಡಿಸಿರುವ ಕೊಪ್ಪಳ ಶಾಸಕ, ಸಂಸದರ ನಡೆ ಖಂಡನಿಯ ಎಂದು ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸದಸ್ಯರಾದ ಡಾ.ಬಸವರಾಜ ಕ್ಯಾವಟರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊಪ್ಪಳ ಜಿಲ್ಲೆ ಅಭಿವೃದ್ಧಿಯಿಂದ ವಂಚಿತವಾಗುತ್ತಿದೆ. ಆಡಳಿತದಲ್ಲಿರುವ ಪಕ್ಷದ ಜನಪ್ರತಿನಿಧಿಗಳು, ಅವರ ಬೆಂಬಲಿಗರು ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗುತ್ತಿದ್ದಾರೆ.

ಇದಕ್ಕೆ ಉತ್ತಮ ನಿದರ್ಶನವೆಂದರೆ ಕೊಪ್ಪಳ ನಗರಸಭೆ ಹಾಗೂ ಅಲ್ಲಿಯ ಅಧಿಕಾರಿ ಮತ್ತು ಗುತ್ತಿಗೆದಾರರ ಮೇಲೆ ಕಳೆದ ಮೂರು ದಿನಗಳಿಂದ ನಡೆದ ನಿರಂತರ ದಾಳಿ ಹಾಗೂ ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡ ಭ್ರಷ್ಟಾಚಾರದ ಅತ್ಯಮೂಲ್ಯ ದಾಖಲೆಗಳೆ ಸಾಕ್ಷಿಯಾಗಿದೆ.

2023-24ನೇ ಸಾಲಿನಲ್ಲಿ 336 ಕಾಮಗಾರಿ ಗಳಲ್ಲಿ ಕಾಮಗಾರಿ ಮಾಡದೇ ಬಿಲ್ ಎತ್ತಿರುವುದು ಸೇರಿ ವಿವಿಧ ಪ್ರಕರಣಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಕುರಿತು ಲೋಕಾಯುಕ್ತ ಅಧಿಕಾರಿಗಳು ದೂರು ಆಧರಿಸಿ, ದಾಳಿ ಮಾಡಿ, ದಾಖಲೆ ಸಂಗ್ರಹಿಸುತ್ತಲೇ ಭ್ರಷ್ಟರಿಗೆ ನಡುಕ ಹುಟ್ಟಿದೆ.

ಹೀಗಾಗಿ ಇನ್ನೂ ದಾಖಲಾತಿ ಪರಿಶೀಲನೆ ನಡೆಯುತ್ತಿರುವಾಗಲೇ ಲೋಕಾಯುಕ್ತ ದಾಳಿ ನಡೆಸಿದ್ದ ಡಿಎಸ್ಪಿ ವಸಂತಕುಮಾರ ಅವರನ್ನು ಎತ್ತಂಗಡಿ ಮಾಡಿರುವ ಕ್ರಮ ಸರಿಯಲ್ಲ.

ಕೊಪ್ಪಳ ನಗರಸಭೆಯ ಜೆಇ ಸೋಮಲಿಂಗಪ್ಪ, ಕಂದಾಯ ಅಧಿಕಾರಿ ಉಜ್ವಲ್ , ಗುತ್ತಿಗೆದಾರರಾದ ಶಕೀಲ್, ಪ್ರವೀಣ್ ಕಂದಾರಿ ಮನೆ ಮೇಲೆ ಹಾಗೂ ನಗರಸಭೆ ಮೇಲೆ ದಾಳಿ ನಡೆಸಿ, ಅಧಿಕಾರಿಗಳು ಕ್ರಮ ಕೈಗೊಳ್ಳುವವರಿದ್ದರು.

ಆದರೆ, ದಾಳಿ ಮಾಡಿದ ಅಧಿಕಾರಿಯನ್ನೇ ದಿಢೀರ್ ಎತ್ತಂಗಡಿ ಮಾಡಿಸುವ ಮೂಲಕ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಸಂಸದ ರಾಜಶೇಖರ ಹಿಟ್ನಾಳ್ ಅವರು ತಮ್ಮ ಬೆಂಬಲಿಗರ ರಕ್ಷಣೆಗೆ ನಿಂತಿದ್ದಾರೆ. ಇದು ದುರಾಡಳಿತದ ಪರಾಮವಧಿಯಾಗಿದೆ. ಇದಕ್ಕೆ ಮುಂದಿನ ದಿ‌ನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕ್ಯಾವಟರ್ ಅವರು ಕಿಡಿಕಾರಿದ್ದಾರೆ.