ಜೂಡಿ ನ್ಯೂಸ್ :
ಕೊಪ್ಪಳ : ಮದ್ಯ ನಿಷೇಧಕ್ಕೆ ಮಹಿಳಾ ಗ್ರಾಮ ಸಭೆಗಳ ನಿರ್ಧಾರಕ್ಕೆ ಪರಮಾಧಿಕಾರ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರ ಮೂಲಕ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆ ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಸೋಮವಾರ ಮನವಿ ಸಲ್ಲಿಸಿದರು.
ಮನವಿಯಲ್ಲಿ ಮಹಿಳಾ ಗ್ರಾಮಸಭೆಗಳ ನಿರ್ಧಾರಕ್ಕೆ(ಠರಾವು) ಪರಮಾಧಿಕಾರ ನೀಡಬೇಕು.ಮದ್ಯ ನಿಷೇಧ ಆಂದೋಲನ- ಕರ್ನಾಟಕ ಹಲವಾರು ಮಹಿಳಾ ಸಂಘಟನೆಗಳ ವೇದಿಕೆಯಾಗಿದೆ.ಸರಕಾರ ಮದ್ಯ ಮಾರಾಟ ನಿಯಂತ್ರಣ ಮಾಡಬೇಕು ಹಾಗೂ ನಮ್ಮ ದೇಶದ ಸಂವಿಧಾನದ ಆರ್ಟಿಕಲ್ 47 ರಂತೆ ದೇಶ ಮದ್ಯ ನಿಷೇಧದತ್ತ ಸಾಗಬೇಕೆಂದು ಈ ವೇದಿಕೆ ೨೦೧೫ ರಿಂದ ಒತ್ತಾಯಿಸುತ್ತಲೇ ಬಂದಿದೆ.ಮದ್ಯ ನಿಷೇಧ ಆಂದೋಲನವನ್ನು ಕಳೆದ ಹತ್ತು ವರ್ಷಗಳಿಂದ ಹಲವಾರು ಪ್ರಗತಿಪರ.ಜನಪರ ಸಂಘಟನೆಗಳು ಸೇರಿದಂತೆ ರೈತ,ದಲಿತ,ಕಾರ್ಮಿಕ ಸಂಘಟನೆಗಳು ಬೆಂಬಲಿಸುತ್ತ ಬಂದಿವೆ.ಸಧ್ಯ ಈ ವೇದಿಕೆಯಿಂದ ಸರಕಾರಕ್ಕೆ ಎರಡು ಬೇಡಿಕೆಗಳನ್ನು ಮುಂದಿಡುತ್ತಿದ್ದೇವೆ.
ಮೊದಲನೇದ್ದು ಹರಿಯಾಣ, ಮಹಾರಾಷ್ಟ್ರ ಹಾಗೂ ಇತರ ಹಲವಾರು ರಾಜ್ಯಗಳಲ್ಲಿ ಮಹಿಳಾ ಗ್ರಾಮ ಸಭೆಗಳಿಗೆ ಪರಮಾಧಿಕಾರ ಕೊಡಲಾಗಿದೆ. ಇಲ್ಲಿಯ ಪಂಚಾಯತ್ ರಾಜ್ ಕಾನೂನಿನಂತೆ ರಾಜ್ಯ ಸರ್ಕಾರಗಳು ಯಾವುದೇ ಒಂದು ಮದ್ಯದ ಅಂಗಡಿಗೆ ಪರವಾನಿಗೆ ಕೊಡಲು ಅಥವಾ ರದ್ದು ಮಾಡಲು ಮಹಿಳಾ ಗ್ರಾಮ ಸಭೆಯಲ್ಲಿ ಒಪ್ಪಿಗೆ ದೊರೆಯಬೇಕು.ಅಂದರೆ ಮಹಿಳಾ ಗ್ರಾಮಸಭೆಯ ಠರಾವಿಗೆ ಮಾನ್ಯತೆ ನೀಡಲೇಬೇಕು.ಕರ್ನಾಟಕದ ಪಂಚಾಯತ್ ರಾಜ್ ಕಾನೂನಿನಲ್ಲಿ ಈ ತರದ ಒಂದು ಅಂಶ 2016ರ ತನಕ ಇತ್ತು.ಆದರೆ ಆ ಸಮಯದಲ್ಲಿ ಇದ್ದ ಸರಕಾರ ಇದನ್ನು ತೆಗೆದು ಹಾಕಿತು.
ಎರಡನೇ ಬೇಡಿಕೆ ಒಂದು ಕಡೆ ಪರವಾನಿಗೆ ಪಡೆದ ಅಂಗಡಿಗಳ ಸಮಸ್ಯೆಯಾದರೆ ಅದಕ್ಕಿಂತ ಹೆಚ್ಚು, ಮನೆ ಮನೆಗಳಲ್ಲಿ, ಪಾನಷಾಪ್, ಕಿರಾಣ ಅಂಗಡಿ,ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ವಾಗುತ್ತಿದ್ದು ಸಮಾಜವನ್ನು ಕೆಟ್ಟ ದಾರಿಗೆ ಒಯ್ಯುತ್ತಿದೆ. ಹಳ್ಳಿಗಳಲ್ಲಿ ಸಣ್ಣ ಸಣ್ಣ ಮಕ್ಕಳು ಮದ್ಯ ಸೇವನೆ ಆರಂಭಿಸಿದ್ದಾರೆ.ಇದೇ ಪದ್ಧತಿ ಮುಂದುವರೆದರೆ ಕರ್ನಾಟಕ ರಾಜ್ಯವೂ ಪಂಜಾಬ್ ರೀತಿಯಲ್ಲಿ ಒಂದು ಹಂತದ ಯುವ ಪೀಳಿಗೆಯನ್ನು ಕಳೆದುಕೊಳ್ಳುವುದು ನಿಶ್ಚಿತ.ಹಾಗಾಗಿ ನಮ್ಮ ಬೇಡಿಕೆ ಇಷ್ಟೇ. ಪ್ರತಿ ಹಳ್ಳಿಯಲ್ಲಿ ಮಹಿಳೆಯರ ಜಾಗೃತ ಸಮಿತಿಗಳನ್ನು ರಚಿಸಿ ಈ ಸಮಿತಿಗೆ ಅರೆ ನ್ಯಾಯಿಕ ಅಧಿಕಾರ (quasi judiciary power) ಕೊಡಬೇಕು.ಯಾಕಂದರೆ ಕಳೆದ ಹತ್ತು ವರ್ಷಗಳಲ್ಲಿ ವೇದಿಕೆ ಹಲವಾರು ಹಳ್ಳಿಗಳಿಂದ ಹೆಸರು ಸಮೇತ ಆಕ್ರಮ ಮದ್ಯ ಮಾರಾಟಗಾರರ ಪಟ್ಟಿಯನ್ನು ಪೊಲೀಸ್ ಹಾಗೂ ಅಬಕಾರಿ ಇಲಾಖೆಗೆ ಕೊಟ್ಟು ಬಂದಿದ್ದಾರೆ. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಆಕ್ರಮ ಮಾರಾಟ ಹೆಚ್ಚುತ್ತಿದೆ.
ಇವೇ ಎರಡು ಬೇಡಿಕೆಗಳ ಮೇಲೆ ಸರ್ಕಾರ ತಕ್ಷಣ ವೇದಿಕೆ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು 25 ನವಂಬರ್ 2025 ರಂದು ಬೆಂಗಳೂರಲ್ಲಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಮಾಡುವ ಪರಿಸ್ಥಿತಿ ಬರುತ್ತದೆ.ತಾವು ತಕ್ಷಣ ಈ ಬೇಡಿಕೆಗಳನ್ನು ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕೆಂದು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್.ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಮುಖಂಡ ಮಹಾಂತೇಶ್ ಹೊಸಮನಿ.ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆಯ ಕುಷ್ಟಗಿ ಹಾಗೂ ಕೊಪ್ಪಳ ಮುಖ್ಯಸ್ಥ ಸುಂಕಪ್ಪ ಮಿಸಿ. ದೇವದಾಸಿ ವಿಮೋಚನಾ ವೇದಿಕೆಯ ಖಜಾಂಚಿ ಶಶಿಕಲಾ ಡಿ.ಮಠದ್.ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಮಹಿಳಾ ನಾಯಕಿ ಮಂಜುಳಾ ಎಂ.ಕಂದಾರಿ.ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಗೌಸ್ ನೀಲಿ. ಬಹುಜನ ಚಳಾವಳಿಯ ಮುಖಂಡ ಸಂಜೀವ್ ಮೂರ್ತಿ ಗುಳದಳ್ಳಿ ಮುಂತಾದವರು ಆಗ್ರಹಿಸಿದ್ದಾರೆ.

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ