ಜೂಡಿ ನ್ಯೂಸ್ :
ಕೊಪ್ಪಳ : (ತಿಂಥಣಿ ಬ್ರಿಜ್): ತಿಂಥಣಿ ಕನಕಗುರು ಪೀಠದ ಮಹಾಸಂಸ್ಥಾನದ ಸ್ವಾಮೀಜಿಗಳಾದ ಶ್ರೀ ಸಿದ್ದರಾಮನಂದ ಸ್ವಾಮೀಜಿ (49) ಅವರು ಇಂದು ಗುರುವಾರ ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ
ಬೆಳಗಿನ ಜಾವ ಬಿಪಿ ಲೋ ಆಗಿರುವ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತೀವ್ರ ಎದೆನೋವು ಮತ್ತು ಹೃದಯಾಘಾತದಿಂದ ಬೆಳಗಿನ ಜಾವ 3.40 ಗಂಟೆ ಸುಮಾರಿಗೆ ಅವರು ಬ್ರಹ್ಮಲೀನರಾದರು ಎಂದು ವೈದ್ಯರು ತಿಳಿಸಿದ್ದಾರೆ.
ಸ್ವಾಮೀಜಿಗಳ ಜೀವನ ಪಯಣ
ಶ್ರೀ ಸಿದ್ದರಾಮನಂದ ಸ್ವಾಮೀಜಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿ ಗ್ರಾಮದವರು.
ಮಹದೇವಯ್ಯ ಮತ್ತು ಜಯಮ್ಮ ದಂಪತಿಯ ಎರಡನೇ ಪುತ್ರರಾಗಿ ಜನಿಸಿದ ಅವರು, ಪೂರ್ವಾಶ್ರಮದಲ್ಲಿ ಮೋಹನ್ ಪ್ರದಾನ ಎಂಬ ಹೆಸರಿನಿಂದ ಪರಿಚಿತರಾಗಿದ್ದರು.
ಆಧ್ಯಾತ್ಮಿಕತೆಯತ್ತ ಬಾಲ್ಯದಿಂದಲೇ ಹೆಚ್ಚಿನ ಒಲವು ಹೊಂದಿದ್ದ ಸ್ವಾಮೀಜಿ, ಸದಾ ಕ್ರಿಯಾಶೀಲ ಮನೋಭಾವದ ವ್ಯಕ್ತಿಯಾಗಿದ್ದರು. 18ನೇ ವಯಸ್ಸಿನಲ್ಲೇ ಮನೆ ಬಿಟ್ಟು ಸಂಚಾರ ಆರಂಭಿಸಿದ ಅವರು, ಜೈನ, ಕ್ರೈಸ್ತ, ಬ್ರಹ್ಮಕುಮಾರಿ ಸೇರಿದಂತೆ ವಿವಿಧ ಧಾರ್ಮಿಕ ಪಂಥಗಳ ಅಧ್ಯಯನ ಮತ್ತು ಅನುಭವವನ್ನು ಪಡೆದರು.
ಚಿತ್ರದುರ್ಗದ ಶ್ರೀಮುರಘಾ ಮಠದಲ್ಲಿ ಅಧ್ಯಯನ ಮತ್ತು ಸೇವೆ ಸಲ್ಲಿಸಿದ್ದ ಸ್ವಾಮೀಜಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಚಳ್ಳಕೆರೆ ತಾಲ್ಲೂಕಿನಲ್ಲಿ ಪೂರ್ಣಗೊಳಿಸಿದ್ದರು. ನಂತರ ಹಿಮಾಲಯದಲ್ಲಿ ಪಾಂಡಿತ್ಯ ಅಧ್ಯಯನ ಮುಗಿಸಿ, ಶರಣ ಸಾಹಿತ್ಯದ ಜೊತೆಗೆ ಎಲ್ಲಾ ಧರ್ಮಗಳ ತತ್ತ್ವಗಳನ್ನು ಅಧ್ಯಯನ ಮಾಡಿದ್ದರು.
ಕನಕಗುರು ಪೀಠದ ಸ್ಥಾಪನೆ ಮತ್ತು ಸೇವೆ
ಸ್ವಾಮೀಜಿಗಳು ಮೊಟ್ಟಮೊದಲು ಸಿಂಧನೂರಿನಲ್ಲಿ ಕನಕಪೀಠ ಆರಂಭಿಸಿದರು. ನಾಲ್ಕು ವರ್ಷಗಳ ನಂತರ, 2011ರಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ ಪ್ರದೇಶಕ್ಕೆ ಆಗಮಿಸಿ, ದಟ್ಟ ಬೆಟ್ಟದ ಪ್ರದೇಶದಲ್ಲಿ ತಮ್ಮ ಇಚ್ಛೆಯಂತೆ ಕನಕಗುರು ಪೀಠವನ್ನು ಸ್ಥಾಪಿಸಿದರು.
ಪ್ರತಿ ವರ್ಷ ಜನವರಿ 12, 13, 14ರಂದು ಹಾಲುಮತ ಸಂಸ್ಕೃತಿ ವೈಭವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಅನೇಕ ಗಣ್ಯರು ಭಾಗವಹಿಸುತ್ತಿದ್ದರು.
ಶಿಕ್ಷಣ, ಸಮಾಜಸೇವೆ ಮತ್ತು ಸಾಂಸ್ಕೃತಿಕ ಕೊಡುಗೆ
ಶ್ರೀ ಸಿದ್ದರಾಮನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಕನಕಗುರು ಪೀಠದಲ್ಲಿ ಪ್ರಾಥಮಿಕ ಶಾಲೆಯಿಂದ ಪಿಯು ಮಟ್ಟದವರೆಗೆ ಶಿಕ್ಷಣ ವ್ಯವಸ್ಥೆ, ಶಾಲಾ ಮಕ್ಕಳಿಗೆ ಉಚಿತ ದಾಸೋಹ ವ್ಯವಸ್ಥೆ, ಬಾಗಲಕೋಟೆ ಜಿಲ್ಲೆಯ ಗುಡೂರು ಮತ್ತು ಮುದ್ದೇಬಿಹಾಳದಲ್ಲಿ ಪದವಿ ಕಾಲೇಜುಗಳು,
ಕೊಪ್ಪಳ ಜಿಲ್ಲೆಯ ಹಾಲವರ್ತಿ ಹಾಗೂ ಕುಷ್ಟಗಿ ತಾಲ್ಲೂಕಿನ ಬಾದಿಮನಾಳದಲ್ಲಿ ಶಾಖಾ ಮಠಗಳು ಸ್ಥಾಪಿಸಲ್ಪಟ್ಟವು. ಇದಲ್ಲದೆ, ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಅವರು ಯಶಸ್ವಿಯಾಗಿ ಆಯೋಜಿಸಿದ್ದರು.
ಪ್ರತಿ ವರ್ಷ ಸಾಹಿತ್ಯ ಮತ್ತು ಸಮಾಜಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಭಾಸ್ಕರ, ಕನಕರತ್ನ ಮತ್ತು ಸಿದ್ಧಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿತ್ತು.
2026 ಜನವರಿ 12, 13 ಮತ್ತು 14ರಂದು ಮೂರು ದಿನಗಳ ಕಾಲ ಹಾಲುಮತ ಸಾಹಿತ್ಯ ಸಮ್ಮೇಳನ ಹೆಸರಿನಲ್ಲಿ ವಿಭಿನ್ನ ಹಾಗೂ ವಿಶಿಷ್ಟ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿ, ನಾಡಿನ ಅನೇಕ ಬುಡಕಟ್ಟು ಸಮುದಾಯಗಳನ್ನು ಮುಖ್ಯ ವೇದಿಕೆಗೆ ಕರೆತರುವ ಕಾರ್ಯವನ್ನು ಸ್ವಾಮೀಜಿ ಮಾಡಿದ್ದಾರೆ.

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ