July 13, 2025

5 ಮತ್ತು 8 ನೇ ತರಗತಿಗಳಲ್ಲಿ ಪಾಸ್-ಫೇಲ್ ಪದ್ಧತಿ ಸ್ವಾಗತರ್ಹ: ಎ ಐ ಡಿ ಎಸ್ ಓ

ಜೂಡಿ ನ್ಯೂಸ್ :

ಕುಸಿಯುತ್ತಿರುವ ಶಿಕ್ಷಣದ ಗುಣಮಟ್ಟ ಸುಧಾರಿಸಲು, ಎಲ್ಲಾ ತರಗತಿಗಳಲ್ಲೂ ಕಡ್ಡಾಯ ತೇರ್ಗಡೆ ನೀತಿ ಸ್ಥಗಿತಗೊಳಿಸಿ ಹಾಗೂ ಸಾರ್ವಜನಿಕ ಶಿಕ್ಷಣ ಬಲಪಡಿಸಿ!

ದೇಶದಾದ್ಯಂತ 5 ನೇ ತರಗತಿ ಮತ್ತು 8 ನೇ ತರಗತಿಗೆ ಪಾಸ್ – ಫೇಲ್ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದ್ದು, ಇದು ‘ಕಡ್ಡಾಯ ತೇರ್ಗಡೆ ನೀತಿ’ ವಿರುದ್ಧ ನಡೆದ ಜನ ಚಳುವಳಿಗೆ ಸಿಕ್ಕ ಭಾಗಶಃ ಜಯವಾಗಿದೆ! ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಲವಾರು ವರ್ಷಗಳಿಂದ ಪಾಲಕರು, ಶಿಕ್ಷಕರು ಮತ್ತು ಶಿಕ್ಷಣ ಪ್ರೇಮಿಗಳು ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಗೆ ಪಾಸ್-ಫೇಲ್ ಪದ್ಧತಿಯನ್ನು ಪುನರಾರಂಭಿಸಲು ಚಳುವಳಿಯನ್ನು ಮುನ್ನಡೆಸುತ್ತಿದ್ದಾರೆ. ಈ ಆಂದೋಲನದ ಒತ್ತಡದಿಂದಾಗಿ, ಸರ್ಕಾರವು ಈಗ 5 ಮತ್ತು 8 ನೇ ತರಗತಿಗಳಿಗೆ ಪಾಸ್-ಫೇಲ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವಂತೆ ತಿಳಿಸಿದೆ. ಆದಾಗ್ಯೂ, ಉಳಿದ ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಗೆ ಪಾಸ್-ಫೇಲ್ ಪದ್ಧತಿ ಯನ್ನು ಜಾರಿಗೊಳಿಸಿಲ್ಲ.

ಕಡ್ಡಾಯ ತೇರ್ಗಡೆ ಪದ್ದತಿ ವಿರುದ್ಧದ ಆಂದೋಲನದಲ್ಲಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಅವಿಭಾಜ್ಯ ಅಂಗವಾಗಿದ್ದು, ಈ ನಿರ್ಧಾರವನ್ನು ‘ಭಾಗಶಃ ವಿಜಯ’ ಎಂದು ಪರಿಗಣಿಸಿ , AIDSO ಕರ್ನಾಟಕ ರಾಜ್ಯ ಸಮಿತಿಯು ಎಲ್ಲಾ ತರಗತಿಗಳಿಗೆ ಕಡ್ಡಾಯ ತೇರ್ಗಡೆ ಪದ್ದತಿ ನೀತಿಯನ್ನು ತೆಗೆದುಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತದೆ. ಹಾಗೆಯೇ ಶಿಕ್ಷಣ ನೀತಿಯಲ್ಲಿ ಬದಲಾವಣೆ ಮಾಡುವ ಮೊದಲು ಸರ್ಕಾರವು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಅನುಸರಿಸಲು ಎಐಡಿಎಸ್ಓ ಆಗ್ರಹಿಸುತ್ತದೆ ಮತ್ತು ದೇಶದ ಎಲ್ಲಾ ಶಿಕ್ಷಣ ಪ್ರೇಮಿಗಳು ಸಹ ‘ಪಾಸ್-ಫೇಲ್ ವ್ಯವಸ್ಥೆ’ ಯನ್ನು ಪುನರಾರಂಭಿಸಲು ಹಾಗೂ ದೇಶದಲ್ಲಿ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡುತ್ತದೆ.