July 12, 2025

ವೀಕೆಂಡ್ ರಜೆ ಹಿನ್ನೆಲೆ ಹಂಪಿಗೆ ಪ್ರವಾಸಿಗರ ದಂಡು

ಜೂಡಿ ನ್ಯೂಸ್ :

ಹೊಸಪೇಟೆ : ಸಾಲು ಸಾಲು ವೀಕೆಂಡ್ ರಜೆಗಳು ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ಎಲ್ಲಿ ನೋಡಿದರೂ ಜನವೋ ಜನ.

ಶುಕ್ರವಾರ ಮಾಜಿ ಪ್ರಧಾನಿ ಡಾ.ಮನಮೋಹನಸಿಂಗ್ ನಿಧನದ ನಿಮಿತ್ತ ರಜೆ, 4 ನೇ ಶನಿವಾರ ಮತ್ತು ಭಾನುವಾರ ಮತ್ತು ಹೊಸ ವರ್ಷ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಆಗಮಿಸುತ್ತಿದ್ದಾರೆ.

ಹಂಪಿಯ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನ, ಎದುರು ಬಸವಣ್ಣ ಮಂಟಪ, ಸಾಸಿವೆ ಕಾಳು ಗಣಪ, ಕಡಲೆಕಾಳು ಗಣಪ, ಉಗ್ರ ನರಸಿಂಹ, ಉದ್ದಾನ ವೀರಭದ್ರೇಶ್ವರ, ಕಮಲ ಮಹಲ್, ಆನೆ ಸಾಲು ಮಂಟಪ, ರಾಣಿ ಸ್ನಾನ ಗೃಹ, ವಿಜಯ ವಿಠಲ ದೇವಸ್ಥಾನ, ಕಲ್ಲಿನ ರಥ ಸ್ಮಾರಕಗಳನ್ನು ವೀಕ್ಷಿಸಿದರು. ಬಳಿಕ ತುಂಗಭದ್ರಾ ನದಿ ದಂಡೆಯಲ್ಲಿ ಪುಣ್ಯಸ್ನಾನ ಮಾಡಿದರು.

ವಿವಿಧ ಸ್ಮಾರಕಗಳ ಮುಂದೆ ಸೆಲ್ಫಿ ಹಾಗು ಗ್ರೂಪ್ ಫೋಟೋ ತೆಗೆಸಿಕೊಂಡು ಸಂತಸ ಪಟ್ಟರು.

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಆಗಮಿಸಿದ್ದರಿಂದ ವ್ಯಾಪಾರ ವಹಿವಾಟು ಜೋರಾಗಿತ್ತು. ಹೊಸಪೇಟೆ, ಕಮಲಾಪುರ ಮತ್ತು ಹಂಪಿಯಲ್ಲಿ ಎಲ್ಲಾ ಲಾಡ್ಜ್ ಗಳು, ರೆಸಾರ್ಟ್ಗಳು ಹೌಸ್ ಫುಲ್ ಆಗಿದ್ದವು.