July 13, 2025

ಒಕ್ಕಲಿಗ ಮುದ್ದಣ್ಣ  ಕೃಷಿ ವಿಜ್ಞಾನದ ಜೊತೆಗೆ ವಚನ ಸಾಹಿತ್ಯದ ಬೇಸಾಯಗಾರರಾಗಿದ್ದರು – ಶಿವಣ್ಣ ಇಜೇರಿ

ಜೂಡಿ ನ್ಯೂಸ್ : 

ಶಹಪುರ: ಕೃಷಿ ಜ್ಞಾನದ ಜೊತೆಗೆ ಶರಣರ ವಚನ ಸಾಹಿತ್ಯದ ಅಚ್ಚಗನ್ನಡದ ಬೇಸಾಯಗಾರ ಒಕ್ಕಲಿಗ ಮುದ್ದಣ್ಣ ಎಂದು ಹಿರಿಯ ಶರಣ ಸಾಹಿತಿ ಶಿವಣ್ಣ ಇಜೇರಿ ಹೇಳಿದರು. ತಾಲೂಕಿನ ಬೇವಿನಹಳ್ಳಿ ಗ್ರಾಮದ ಆನೆಗುಂದಿ ಅವರ ತೋಟದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಎಳ್ಳ ಅಮಾವಾಸ್ಯೆಯ ನಿಮಿತ್ಯ ಶರಣ ಒಕ್ಕಲಿಗ ಮುದ್ದಣ್ಣ ಜಯಂತಿ ಅಂಗವಾಗಿ ವಿಚಾರ ಸಂಕಿರಣ ಹಾಗೂ ವನ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 ಭೂಮಿಯಿಂದ ಬೆಳೆದ ಬೆಳೆಗಳಿಂದ ಭೂಮಿಗೆ ಒಂದಿಷ್ಟು (ಚರಗ ಚೆಲ್ಲುವುದು) ಸಾಂಕೇತಿಕವಾಗಿ ದಾಸೋಹ ಮಾಡಿ ಉಣ್ಣುವ ನಿಜ ಜೀವಿಗಳಿಗೆ ಪ್ರೀತಿಯ ದಾಸೋಹ ಮಾಡಿ ಉಣ ಬಡಿಸುವದೆ ಈ ಎಳ್ಳ ಅಮಾವಾಸ್ಯೆಯ ಮುಖ್ಯ ಉದ್ದೇಶವೆಂದು ನುಡಿದರು. ಅಂಗವೇ ಭೂಮಿಯಾಗಿ, ಲಿಂಗವೇ ಬೆಳೆಯಾಗಿ ವಚನಾಮೃತದ ಬೀಜವ ಬಿತ್ತಿ ಆಧ್ಯಾತ್ಮದ ಸಾರವನ್ನು ಕೃಷಿ ಪರಿಸರದ ಮೂಲಕ ಬದುಕಿನ ಮೌಲ್ಯಗಳು ತಮ್ಮ ವೃತ್ತಿ ಬದುಕಿನ ನೇಗಿಲನೊಂದಿಗೆ ಬರೆದ ಮಹಾಶರಣ ಒಕ್ಕಲಿಗ ಮುದ್ದಣ್ಣ ಎಂದು ಡಾ.ಸಿದ್ದರಾಮ ಹೊನಕಲ್ ಹೇಳಿದರು.

 ಸಿದ್ದಲಿಂಗಣ್ಣ ಆನೆಗೊಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಕ್ಕಲಿಗ ಮುದ್ದಣ್ಣ ಒಕ್ಕಲತನವನ್ನೇ ಶ್ರೇಷ್ಠ ಉದ್ಯೋಗವೆಂದು ನಂಬಿದ ಇವರು ವಚನದಲ್ಲಿ ಬದುಕಿನ ಸಾರ, ರೈತರ ಸಲಹೆ, ರೈತರ ಬದುಕಿನ ಸಾಮರಸ್ಯ, ಸಮಾಜದ ಹಾಗೂ ಹೋಗುಗಳನ್ನು ಬಿಂಬಿಸುವ ರೀತಿಯಲ್ಲಿ ವಿವರಿಸಿದ್ದಾರೆ, ಅವರ ಮೌಲ್ಯಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. 

 ಈ ಸಂದರ್ಭದಲ್ಲಿ, ಖ್ಯಾತ ಸಂಗೀತ ಕಲಾವಿದರಾದ ಚಂದ್ರಶೇಖರ್ ಗೋಗಿ ರವರು ವಚನ ಗಾಯನ ನಡೆಸಿಕೊಟ್ಟರು. ಮಹಿಳಾ ಸಾಹಿತಿ ಸುರಿಯಾ ಬೇಗಂ ಹಾದಿಮನಿ, ರಾಂಪುರ, ಯುವ ಮುಖಂಡ ಶರಣಬಸವ ಪೊಲೀಸ್ ಬಿರಾದರ, ಸೇರಿದಂತೆ ಇತರರು ಉಪಸ್ಥಿತರಿದ್ದರು, ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿನ್ನೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಿಪ್ಪಣ್ಣ ಖ್ಯಾತನಾಳ ಸ್ವಾಗತಿಸಿ ನಿರೂಪಿಸಿ ವಂದಿಸಿದರು.