ಜೂಡಿ ನ್ಯೂಸ್ :
ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 28 ಜೋಡಿಗಳು
ಹೊಸಪೇಟೆ(ವಿಜಯನಗರ) : ವಿಜಯನಗರ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಬುಧವಾರ ಜನಸೇವಾ ಟ್ರಸ್ಟ್ ಇವರ ಆಶ್ರಯದಲ್ಲಿ ನೆರಳು ಪತ್ರಿಕೆಯ 28ನೇ ವಾರ್ಷಿಕೋತ್ಸವ ನಿಮಿತ್ತ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 28 ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕ್ರಾಂತಿ ನೆರಳು ಪತ್ರಿಕೆಯ ಸಂಪಾದಕ ಬುಡ್ಡಿ ಬಸವರಾಜ ಪ್ರಾಸ್ತಾವಿಕ ಮಾತನಾಡಿ, ಪತ್ರಿಕೆಯ 28ನೇ ವಾರ್ಷಿಕೋತ್ಸವ ನಿಮಿತ್ತ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡು 28 ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಗ್ರಾಮದ ಎಲ್ಲಾ ವರ್ಗದ ಜನ ಸೇರಿಕೊಂಡು ಅದ್ದೂರಿಯಾಗಿ ಯಶಸ್ವಿಗೊಳಿಸಿದ್ದಾರೆ. ತಾಲೂಕು ಮಟ್ಟದಲ್ಲಿ ಮಾಡಬೇಕಿತ್ತು ಅಂತ ಕೆಲವರು ಹೇಳುತ್ತಿದ್ದರು. ಆದರೆ ಇದೇ ನಮ್ಮ ಹಂಪಾಪಟ್ಟಣ ಗ್ರಾಮದಲ್ಲಿ 5 ದೇವಾನುದೇವತೆಗಳ ಪುಷ್ಯಸ್ಥಳವಾಗಿದ್ದರಿಂದ ಇಲ್ಲಿಯೇ ನೆರವೇರಿಸಲು ಸಿದ್ದರಾದೆವು. ಈ ಬಾರಿ ಮಹಿಳೆಯವರಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿಸಬೇಕೆಂಬ ಉದ್ದೇಶದಿಂದ ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಕುಲಪತಿಗಳಾದ ಡಾ.ಮಲ್ಲಿಕಾ ಘಂಟಿ ಮೇಡಂ ಅವರಿಂದ ಉದ್ಘಾಟನೆ ಮಾಡಿಸಿದ್ದೇವೆ ಎಂದರು.
ನೆರಳು ಪತ್ರಿಕೆ ಭ್ರಷ್ಟಾಚಾರ ವಿರುದ್ದ ಧ್ವನಿ ಎತ್ತಿ, ಹಲವಾರು ಪ್ರಕರಣಗಳನ್ನು ಎದುರಿಸಿದರೂ ಎದೆಗುಂದದೇ, ಎಲ್ಲಾ ಸಾರ್ವಜನಿಕರರ ಬೆಂಬಲದಿಂದ ನಿರಂತರವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ನೂತನ ವಧು ವರರು ತಂದೆ, ತಾಯಿ, ಅತ್ತೆ, ಮಾವನವರನ್ನು ಪ್ರೀತಿಯಿಂದ ನೋಡಿಕೊಂಡು ಖುಷಿಯಿಂದ ಬಾಳಿರಿ. ಇಂದಿನ ದಿನಗಳಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ನಡೆಯುತ್ತಿದೆ. ನಾವು ಸಮಾಜದಲ್ಲಿ ಜಾತಿ, ಧರ್ಮ ಬೇಧ ಭಾವ ಮರೆತು ಎಲ್ಲರೂ ಒಂದಾಗಿ ನಡೆಯಬೇಕು. ಬುದ್ದ ಬಸವ ಕನಕ ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಮಾತನಾಡಿ, ಅಂತರ್ಜಾತಿ ವಿವಾಹದಿಂದ ಮಾತ್ರ ಜಾತಿ ನಿರ್ಮೂಲನೆ ಮಾಡಬಹುದು ಎಂದು ಆಗಲೇ ಬುದ್ದ ಬಸವ ಅಂಬೇಡ್ಕರ್ ಅವರು ಹೇಳಿದ್ದರು. ಇಲ್ಲಿ ನೋಡಿದರೆ ಅವರು ನಿಜವಾಗಿಯೂ ಬದುಕಿದ್ದಾರೆ ಅನಿಸುತ್ತಿದೆ. ಭಾರತೀಯ ಪರಂಪರೆ ಅಂದ್ರೆ ಏನು ಅಂತ ಹಂಪಾಪಟ್ಟಣವನ್ನು ನೋಡಿದರೆ ಗೊತ್ತಾಗುತ್ತದೆ. ನಾನು ಬುದ್ದ ಬಸವ ಅಂಬೇಡ್ಕರ್ ಅನುಯಾಯಿ. ನನ್ನ ಸಂಬಂಧಿಕರ ಮದುವೆಯನ್ನು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಡಿಸಿದ್ದೇನೆ. ಆದರೆ ನನ್ನ ಮಗನ ಮದುವೆ ಅಂತರ್ಜಾತಿ ಹುಡುಗಿಯೊಂದಿಗೆ ಮಾಡಿಸಬೇಕು ಅಂತ ಆಸೆ ಇದ್ದರೂ ಅದು ನೆರವೇರಲಿಲ್ಲ ಎಂಬ ಕೊರಗು ಇದೆ. ಹಾಗಾಗಿ ಆ ಕೊರಗನ್ನು ಕಳೆದುಕೊಳ್ಳಲು ಈ ರೀತಿಯ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದೇನೆ ಎಂದರು.
ಇಂದಿನ ಮದುವೆಗಳು ತಂದೆ ತಾಯಿಗಳಿಗೆ ಆರ್ಥಿಕ ಹೊರೆಯಾಗುತ್ತಿವೆ. ಈ ರೀತಿಯ ಸಾಮೂಹಿಕ ವಿವಾಹದಲ್ಲಿ ಮಾಡಿದರೆ ಆರ್ಥಿಕ ಹೊರೆ ತಗ್ಗಿಸಬಹುದು. ಅತ್ತೆ ಸೊಸೆಯರು ನಮ್ನಂತೆ ಅನ್ಯೋನ್ಯವಾಗಿರಬೇಕು. ರಕ್ಷಣೆ ವಿಷಯದಲ್ಲಿ ಜಗಳ ಬರುತ್ತೆ. ಅದನ್ನು ಬಿಟ್ಟು ಶರಣರ ಹಾದಿಯಲ್ಲಿ ನಡೆದರೆ ಜಗಳವಿರುವುದಿಲ್ಲ. ಇಂದಿನ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ದೇಶ ಒಡೆಯುವವರಿಗೆ ಹಂಪಾಪಟ್ಟಣ ಇಡೀ ದೇಶಕ್ಕೆ ಸಂದೇಶ ನೀಡುವಂತಿದೆ. ಬಿಸಿಲಲ್ಲಿರುವವರಿಗೆ, ದಣಿದವರಿಗೆ ಮರ ನೆರಳು ನೀಡಿದಂತೆ ನೆರಳು ಪತ್ರಿಕೆ ಸಮಾಜದಲ್ಲಿನ ಅಶಕ್ತರಿಗೆ, ಧ್ವನಿ ಇಲ್ಲದವರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಬಿಜೆಪಿ ಮುಖಂಡ ಮುಟುಗಾನಹಳ್ಳಿ ಕೊಟ್ರೇಶ ಮಾತನಾಡಿ, ಬುಡ್ಡಿ ಬಸವರಾಜ ಅವರು ಇಲ್ಲಿಯವರೆಗೆ ಅಂದಾಜು 1000 ಮದುವೆಗಳನ್ನು ಮಾಡಿಸಿದ್ದಾರೆ. ಅವರೇನು ಸಿಎಂ, ಸಚಿವ ಅಥವಾ ಶಾಸಕನ ಮಗನೂ ಅಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಇಷ್ಟೊಂದು ಸಾಧನೆ ಮಾಡಿರೋದು ನೋಡಿದರೆ ಹೆಮ್ಮೆಯಾಗುತ್ತದೆ. ಕೆಲವು ರಾಜಕಾರಿಣಿಗಳು ರಾಜಕೀಯ ಗುರಿ ಮತ್ತು ಉದ್ದೇಶವನ್ನಿಟದಟುಕೊಂಡು ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡುತ್ತಾರೆ. ಆದರೆ ಒಬ್ಬ ಸಾಮಾನ್ಯ ಪತ್ರಕರ್ತ ಕೇವಲ ಸೇವೆಯನ್ನಿಟ್ಟುಕೊಂಡು ಮಾಡುತ್ತಿದ್ದಾನಲ್ಲಾ ಅದು ಗ್ರೇಟ್ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೆ.ಎಂ.ವೀರಸಂಗಯ್ಯ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲೇ ನೋಡಾ ಎನ್ನುವಂತೆ ವಿದ್ಯಾರ್ಥಿ ಜೀವನದಲ್ಲೇ ನಾನು ಬುಡ್ಡಿ ಬಸವರಾಜನ ನಾಯಕತ್ವ ಗುಣವನ್ನು ನೋಡಿದ್ದೇನೆ. ತನ್ನ ಸಮಾಜಮುಖಿ ಕಾರ್ಯಗಳಿಂದಲೇ ಇಂದು ಎತ್ತರಕ್ಕೆ ಬೆಳೆದಿದ್ದಾನೆ ಎಂದು ಶ್ಲಾಘಿಸಿದರು.
28 ನೂತನ ಜೋಡಿಗಳಿಗೆ ಮಾಂಗಲ್ಯಧಾರಣೆ :
ದಿವ್ಯಸಾನಿದ್ಯವಹಿಸಿ ಆಶೀರ್ವಚನ ನೀಡಿದ ನವಲಿ ಹಿರೇಮಠ, ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಂಪಾಪಟ್ಟಣದ ಸಪ್ಪಳ ನೋಡಿದರೆ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಷ್ಟು ಸಪ್ಪಳ ಕೇಳಿಸಿದಷ್ಟು ಭಾಸವಾಗುತ್ತಿದೆ. ನೆರಳು ಪತ್ರಿಕೆಯು ಜಾತಿಗಾಗಿ, ಪಂಗಡಕ್ಕಾಗಿ ಅಲ್ಲದೇ ಇಡೀ ವಿಶ್ವವೇ ಒಂದು ಎಂಬ ಸಂದೇಶ ನೀಡುತ್ತಿದೆ. 28 ಮದುವೆ ಸುಮ್ಮನೆ ಅಲ್ಲ. ಅದೊಂದು ದೊಡ್ಡ ಸಾಧನೆ. ಅಂದು ನ್ಯಾಯಕ್ಕಾಗಿ ಸಂಗೊಳ್ಳಿ ರಾಯಣ್ಣ ನಿಂತಂತೆ ಇಂದು ಆಧುನಿಕ ರಾಯಣ್ಣನಂತೆ ಬುಡ್ಡಿ ಬಸವರಾಜ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದಾರೆ ಎಂದು ಹಾಡಿ ಹೊಗಳಿದರು.
ಬಳಿಕ ನೂತನ ದಂಪತಿಗಳಿಗೆ ಪ್ರಮಾಣಪತ್ರ ವೇದಿಕೆಯ ಗಣ್ಯರಿಂದ ವಿತರಿಸಲಾಯಿತು.
ಇದಕ್ಕೂ ಮುನ್ನ ನಂದಿಪುರ ಪುಣ್ಯಕ್ಷೇತ್ರದ ಡಾ.ಮಹೇಶ್ವರ ಸ್ವಾಮಿಗಳು, ಗರಗ ನಾಗಲಾಪುರ ಒಪ್ಪತ್ತೇಶ್ವರ ಮಠದ ಮ.ನಿ.ಪ್ರ.ಮರಿಮಹಾಂತ ಸ್ವಾಮಿಗಳು, ಕೊಟ್ಟೂರು ಉತ್ತಂಗಿ ಸಂಸ್ಥಾನಮಠದ ಜಗದ್ಗುರು ಸೋಮಶಂಕರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಬಳಿಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜೆ.ಎಂ.ವೀರಸಂಗಯ್ಯ, ಗೊಂದಳಿ ರಾಮಣ್ಣ, ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿಯವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಲ್ಲಾಹುಣಸೆ ರಾಮಣ್ಣ, ಸಾಹಿತಿ ಉಜ್ಜಿನಿ ರುದ್ರಪ್ಪ, ನೆರಳು ಪತ್ರಿಕೆಯ ಉಪ ಸಂಪಾದಕ ವಿ.ಗಾಳೆಪ್ಪ, ಪ್ರಥಮಹೆಜ್ಜೆ ಪತ್ರಿಕೆಯ ಉಪ ಸಂಪಾದಕ ಪ್ರಕಾಶ್ ಕಾಕುಬಾಳು, ವಿಜಯನಗರ ಕಾಲೇಜಿನ ಸಹ ಪ್ರಾಧ್ಯಾಪಕ ಗಾದೆಪ್ಪ, ಕರಿಯಪ್ಪ ಗುಡಿಮನೆ, ನವೋದಯ ಯುವಕ ಸಂಘದ ವಿ.ಹನುಮಂತ, ಜನನಿ ಸೇವಾ ಟ್ರಸ್ಟ್ ನ ಯು.ಕೇಶವಮೂರ್ತಿ, ಗಂಟಿ ನಾಗರಾಜ, ರವಿ ಮಣ್ಣೂರು, ಎನ್.ಎಂ.ಗೌಸ್, ಗ್ರಾ.ಪಂ.ಅಧ್ಯಕ್ಷ ಬಿ.ನಾಗರಾಜ, ಉಪಾಧ್ಯಕ್ಷೆ ಹನುಮಕ್ಕ ಹುಲುಗಪ್ಪ, ಬಿ.ಗಂಗಣ್ಣ, ಕನ್ನಿಹಳ್ಳಿ ಚಂದ್ರಶೇಖರ, ಅನಿಲಕುಮಾರ ಜಾಣ, ಬೆಣಕಲ್ ಪ್ರಕಾಶ್, ಕಲ್ಗುಡಿಯಪ್ಪ, ಲಿಂಗರಾಜ ಯಾದವ್, ಪೂಜಾರಿ ಸೋಮನಾಥ, ಜಿ.ರಾಘವೇಂದ್ರ, ಜಿ.ಪಕ್ಕೀರಪ್ಪ, ಬಂಟರ ಕುಬೇರ, ಎನ್.ನಾಗರಾಜ, ಭಜಂತ್ರಿ ಸೋಮನಾಥ ಸೇರಿದಂತೆ ಸದಸ್ಯರು, ಊರಿನ ಮುಖಂಡರು ಇದ್ದರು.
ಮಹಾಂತೇಶ ಮತ್ತು ಕಲಾ ತಂಡದಿಂದ ಉತ್ತಮ ಕ್ರಾಂತಿ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು. ಬಿ.ಹುಲುಗಪ್ಪ ಕಾರ್ಯಕ್ರಮ ನಿರ್ವಹಿಸಿದರು.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ