September 14, 2025

ನಮ್ಮ ಜಿಲ್ಲೆ ನಮ್ಮ ಹೆಮ್ಮೆ : ಸುಕ್ಷೇತ್ರ ವೆಂಕಟಗಿರಿ

ಜೂಡಿ ನ್ಯೂಸ್:

ನಮ್ಮ ಜಿಲ್ಲೆ ನಮ್ಮ ಹೆಮ್ಮೆ : ಸುಕ್ಷೇತ್ರ ವೆಂಕಟಗಿರಿ

 ಕೊಪ್ಪಳ : ವೆಂಕಟಗಿರಿಯು ಗಂಗಾವತಿ ನಗರದಿಂದ ವಾಯುವ್ಯಕ್ಕೆ ಸುಮಾರು 12 ಕಿ.ಮೀ ದೂರದಲ್ಲಿದೆ. ವೆಂಕಟಗಿರಿ ಪ್ರಾಚೀನ ವೆ೦ಕಟೇಶ್ವರ ದೇವಾಲಯದಿಂದ ಪ್ರಸಿದ್ಧವಾಗಿದೆ. ಗ್ರಾಮದ ಬಳಿ ಇರುವ ಬೆಟ್ಟದ ಗವಿಯೊಂದರಲ್ಲಿ ಮೂಲ ವೆಂಕಟೇಶ್ವರ ಗುಹಾ ದೇವಾಲಯವಿದೆ.ಆ ಗವಿಯಲ್ಲಿ ವೆಂಕಟೇಶ್ವರ ವಿಗ್ರಹವಿದೆ. ಈ ವೆಂಕಟೇಶ್ವರನಿಂದಾಗಿ ಈ ಬೆಟ್ಟವೆಂಕಟಗಿರಿ ಎನಿಸಿತು.

ಭಕ್ತರಿಗೆ ಬೆಟ್ಟ ಏರಿ ವೆಂಕಟೇಶ್ವರನ ದರ್ಶನ ಕಷ್ಟದಾಯಕವಾದ್ದರಿಂದ ಅವರ ಕೋರಿಕೆಯ ಮೇರೆಗೆ ವಿಜಯನಗರ ಕಾಲದಲ್ಲಿ ಅವರ ಸಾಮಂತನಾಗಿದ್ದ ಕನಕಗಿರಿಪಾಳೆಯಗಾರ ನವಾಬ ಉಡಚಪ್ಪನಾಯಕ (1510 – 1533)ನು ವಿಜಯನಗರದ ಸಾಮ್ರಾಟ ಕೃಷ್ಣದೇವರಾಯನ ಅನುಮತಿ ಮತ್ತು ಸಹಾಯ ಪಡೆದು ಈ ದೇವಾಲಯವನ್ನು ಬೆಟ್ಟದ ಕೆಳಭಾಗದಲ್ಲಿ ನಿರ್ಮಿಸಿದನು.

ಹಿಂದೆ ಪ್ರೌಢದೇವರಾಯನು ಗ್ರಾಮದಲ್ಲಿ ಜನರಿಗಾಗಿ ಕೆರೆಯೊಂದನ್ನು ಕಟ್ಟಿಸಿದ್ದನು ಅದಕ್ಕೆ ಈಗಲೂ ರಾಯರ ಕೆರೆ ಎನ್ನುತ್ತಾರೆ. ವೆಂಕಟೇಶ್ವರ ದೇವಾಲಯವು ವಿಜಯನಗರ ವಾಸ್ತುಶೈಲಿಯಲ್ಲಿ ಸುಂದರವಾಗಿ ನಿರ್ಮಾಣವಾಗಿದೆ. ಗರ್ಭಗೃಹ, ಅಂತರಾಳ, ಸಭಾಮಂಟಪ ಮತ್ತು ದ್ವಾರಮಂಟಪ ಅದರ ಮೇಲೆ ಎತ್ತರವಾದ ಗೋಪುರವಿದೆ. 

ಸಭಾಮಂಟಪಕ್ಕೆ ಮೂರು ದಿಕ್ಕಿಗೂ ದ್ವಾರಗಳಿವೆ. ದೇವಾಲಯದ ಹೊರ ಗೋಡೆ ಸಂಗಮರ ಕಾಲದ ದೇವಾಲಯಗಳಂತೆ ಅರ್ಧ ಗಂಬಗಳಿಂದ ಕೂಡಿದ ದೇವ ಕೋಪಗಳಿವೆ. ಅವುಗಳ ಮೇಲೆ ಶಾಲ ಕೂಟಗಳಿವೆ. ಗರ್ಭಗೃಹದ ಮೇಲೆ ಉಪಶಿಖರಗಳು, ಗೂಡುಗಳು ಮತ್ತು ಗಾರೆಶಿಲ್ಪಗಳಿಂದ ಅಲಂಕೃತವಾದ ದ್ರಾವಿಡ ಮಾದರಿಯ ಶಿಖರವಿದೆ. ಪ್ರವೇಶದ್ವಾರದ ಎರಡು ಬದಿಯಲ್ಲಿ ದ್ವಾರಪಾಲಕರ ವಿಗ್ರಹಗಳಿವೆ.

 ಪೂರ್ವಾಭಿಮುಖವಾಗಿರುವ ದೇವಾಲಯದ ದ್ವಾರ ಬಾಗಿಲ ಎದುರಿಗೆ ಗರುಡಗಂಬವಿದೆ.

ಪ್ರತಿವರ್ಷ ಮಾರ್ಚ ಹಾಗೂ ಎಪ್ರಿಲ್ ತಿಂಗಳುಗಳ ನಡುವೆ ವೆಂಕಟೇಶ್ವರ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಐದು ದಿನಗಳ ಕಾಲ ವಿವಿಧ ಪೂಜೆ, ಉತ್ಸವಗಳು ನೆರವೇರುತ್ತದೆ.

– ನಟರಾಜ ಸೋನಾರ್